Showing posts with label ದೀಪಾವಳಿ ಹಬ್ಬ deepavali kannada. Show all posts
Showing posts with label ದೀಪಾವಳಿ ಹಬ್ಬ deepavali kannada. Show all posts

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು)

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 

ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

 
ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.
ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು
ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
 
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು

🕉*ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?*

1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.

4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.
*ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ*
ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.
ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .
*ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ*|
*ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||*
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ ಕಲಶದಲ್ಲಿ ಅಕ್ಷತೆ ಹಾಕಿ
*ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.*

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ
*ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ*

7) ಧೂಪವನ್ನು ತೋರಿಸಿ
*ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ* |
*ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್* ||

😎 *ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|*
*ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ*||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9) ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ.

11) *ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್*
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ.

12) ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ.
*ಹೇ ಗಂಗೇ! ತವ ಕೋಮಲಾಂಘ್ರಿ* *ನಲಿನಂ ರಂಭೋರು ನೀವಿಲಸತ್*
*ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು:* |
*ಸನ್ಮುದ್ರಾ೦ಗದ ಕಂಕಣಾವೃತಕರ೦* *ಸ್ಮೇರಂ ಸ್ಫುರತ್ಕುಂಡಲಂ*
*ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |*
ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

13) ತದನಂತರ
ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ
ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.

14) ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ

15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.
ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.
ಇದನ್ನು ಒಂದು ತಿಂಗಳು ಹಚ್ಚಬೇಕು.

16) ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು.
****
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು