ದೇವರು ನೈವೇದ್ಯ ತಿಂತಾನಾ?

*ದೇವರು ನೈವೇದ್ಯ ತಿಂತಾನಾ?*

*ಒಂದು ಅದ್ಭುತ ವಿಚಾರದ ವಿಶ್ಲೇಷಣೆಯ ಸಂವಾದ ಈ ಕೆಳಗಿದೆ.* 

ನೈವೇದ್ಯ :  ಆ ದೇವರು ನಾವಿಟ್ಟ ನೈವೇದ್ಯವನ್ನು ತಿನ್ನುವನೇನು? 

ಇದು ನಂಬಿಕೆಯಿಲ್ಲದವರ ಪ್ರಶ್ನೆ.  ಇದಕ್ಕೆ ಉತ್ತರವೆನ್ನುವಂತೆ ಓದು ಸೂಕ್ತ ವಿವರಣೆ ನೀಡುವ ಒಂದು ಪ್ರಾಮಾಣಿಕ ಪ್ರಯತ್ನ. 

ಒಬ್ಬ ಗುರು ಮತ್ತು  ಶಿಷ್ಯರ ಸಂವಾದ ಹೀಗೆ ನಡೆದಿತ್ತು. 
  
ದೇವರನ್ನು ನಂಬದ ಶಿಷ್ಯನೊಬ್ಬ ತನ್ನ ಗುರುವನ್ನು " ದೇವರು ನಾವು ಮಾಡುವ ನೈವೇದ್ಯವನ್ನು ಸ್ವೀಕರಿಸುವನೇ? ಹಾಗೆ ನಾವು ನೀಡುವ ನೈವೇದ್ಯವನ್ನು ಸ್ವೀಕರಿಸಿದರೆ ನಾವು 'ಪ್ರಸಾದ' ವಿನಿಯೋಗ ಮಾಡುವುದು ಹೇಗೆ? ಆ ದೇವರು ನಾವು ನೀಡುವ ನೈವೇದ್ಯವನ್ನು ನಿಜವಾಗಿಯೂ ಸ್ವೀಕರಿಸುವನೇ ಗುರುಗಳೇ?" ಎಂದು ಪ್ರಶ್ನಿಸಿದ. 
 
ಗುರುಗಳು ಯಾವ ಉತ್ತರವನ್ನೂ ನೀಡದೆ ಆ ಶಿಷ್ಯನಿಗೆ ತರಗತಿಗೆ  ತಯಾರಾಗಲು ಆದೇಶಿಸಿದರು.  

ಆ ದಿನ ಗುರುಗಳು 'ಉಪನಿಷತ್ತು' ಗಳ ಪಾಠವನ್ನು ಆರಂಭಿಸಿದರು. ಶಿಷ್ಯರಿಗೆ ' ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ...... ಎಂಬ ಮಂತ್ರದ ಬೋಧನೆಯನ್ನು ಮಾಡಿ, ಸೃಷ್ಟಿಯ ಎಲ್ಲವೂ ಪೂರ್ಣದಿಂದಲೇ ಆಗಿರುತ್ತದೆ, ಪೂರ್ಣಕ್ಕೆ ಪೂರ್ಣವನ್ನು ಸೇರಿಸಿದರೆ ಅಥವಾ ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ, ಎಂದು ವಿವರಿಸಿದರು.   

ನಂತರ ಎಲ್ಲರಿಗೂ ಈಶಾವಾಸ್ಯೋಪನಿಷತ್ತಿನ ಮಂತ್ರಗಳನ್ನು ಕಂಠಸ್ಥ ಮಾಡಿಕೊಳ್ಳಲು ಆದೇಶಿಸಿದರು. ಎಲ್ಲಾ ವಿದ್ಯಾರ್ಥಿಗಳೂ ಅಭ್ಯಾಸದಲ್ಲಿ ತೊಡಗಿದರು. ಹೀಗೆ ಎರಡು ಮೂರುದಿನಗಳ ಸತತ ಅಭ್ಯಾಸದ ನಂತರ, ಗುರುಗಳು, ಆ ನೈವೇದ್ಯದ ವಿಚಾರವಾಗಿ ತನ್ನ ಸಂದೇಹವನ್ನು ವ್ಯಕ್ತಪಡಿಸಿದ ಶಿಷ್ಯನನ್ನು ಕರೆದು, ಅಭ್ಯಾಸಮಾಡಿದ ಮಂತ್ರಗಳನ್ನು ಪುಸ್ತಕವನ್ನು ನೋಡದೆ ಹೇಳಲು, ಹೇಳಿದರು. ಆ ಶಿಷ್ಯ  ಕಂಠಸ್ಥ ಹೇಳಿ, ಒಪ್ಪಿಸಿದ.  
 
ಆಗ, ಗುರುಗಳು ಮುಗುಳುನಗುತ್ತಾ ' ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಬಾಯಿಪಾಠ ಮಾಡಿದೆಯಾ?" ಎಂದು ಪ್ರಶ್ನಿಸಿದರು. ' ಹೌದು ಗುರುಗಳೇ  ನಾನು ಆ ಪುಸ್ತಕದಲ್ಲಿ ಹೇಗಿದೆಯೋ ಹಾಗೆಯೇ ಆ ಮಂತ್ರಗಳ ಉಚ್ಛಾರಣೆ ಮಾಡಿದೆ, ಗುರುಗಳೇ' ಎಂದು ಉತ್ತರಿಸಿದ. 
 
" ನೀನು ಆ ಪುಸ್ತಕದಲ್ಲಿನ ಎಲ್ಲಾ ಪದಗಳನ್ನೂ ನಿನ್ನ ಮನಸ್ಸಿಗೆ ತೆಗೆದುಕೊಂಡಿದ್ದೀಯೆ ಎಂದಮೇಲೆ ಆ ಪುಸ್ತಕದಲ್ಲಿ ಆ ಪದಗಳು ಇನ್ನೂ ಅಲ್ಲೇ ಇವೆಯಲ್ಲ?" ಎಂದು ಗುರುಗಳು ಕೇಳಿದರು. ಶಿಷ್ಯ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತ. ಗುರುಗಳು  " ನಿನ್ನ ಮನಸ್ಸಿನಲ್ಲಿರುವ ಪದಗಳು ' ಸೂಕ್ಷ್ಮ ಸ್ಥಿತಿಯಲ್ಲಿವೆ' ಮತ್ತು ಪುಸ್ತಕದಲ್ಲಿನ ಪದಗಳು 'ಸ್ಥೂಲಸ್ಥಿತಿ' ಯಲ್ಲಿವೆ " ಎಂದರು.  

ಹಾಗೆಯೇ ಆ ದೇವರೂ ಸಹ ' ಸೂಕ್ಷ್ಮ ಸ್ಥಿತಿ' ಯಲ್ಲಿದ್ದಾನೆ. ನಮ್ಮ ಕಣ್ಣಿಗೆ ಕಾಣುವುದಿಲ್ಲ. ನಾವು ಅವನಿಗೆ ಮಾಡುವ ನೈವೇದ್ಯ 'ಸ್ಥೂಲ ಸ್ಥಿತಿ'ಯಲ್ಲಿದೆ. ಆದ್ದರಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಆ ದೇವರು ಸೂಕ್ಷ್ಮ ಸ್ಥಿತಿಯಲ್ಲಿಯೇ ಆ ನೈವೇದ್ಯವನ್ನು ಸ್ವೀಕರಿಸುವುದರಿಂದ, ನಾವು ಕೊಟ್ಟ ನೈವೇದ್ಯ ಅವನು ಸ್ವೀಕರಿಸಿದ ಮೇಲೂ ಕಿಂಚಿತ್ತೂ ಕಡಿಮೆಯಾಗುವುದಿಲ್ಲ.   

"ನಾವು ಮಾಡಿದ ನೈವೇದ್ಯವನ್ನು ಆ ದೇವರು ಸೂಕ್ಷರೂಪದಲ್ಲಿ ಸ್ವೀಕರಿಸುತ್ತಾನೆ, ನಂತರ ನಾವು ಆ ನೈವೇದ್ಯವೆಂದೇ ' ಪ್ರಸಾದ' ವೆಂದು ಸ್ಥೂಲರೂಪದಲ್ಲಿ ಪಡೆಯುತ್ತೇವೆ" ಎಂದು ಗುರುಗಳು ವಿವರಿಸಿದರು. ಈ ಮಾತುಗಳನ್ನು ಕೇಳಿ ಆ ಶಿಷ್ಯ ' ದೇವರಲ್ಲಿ' ತನ್ನ ಅಪನಂಬಿಕೆಗೆ ನೊಂದು ಗುರುಗಳಿಗೆ ಶರಣಾದ. ಹೀಗೆಯೇ ನಾವು ಪರಮಾತ್ಮನನ್ನು ನಂಬಿ ನಡೆಸುವ ಹಲವಾರು ಕಾರ್ಯಗಳು ಹೇಗೆ ಸಾರ್ಥಕ್ಯವನ್ನು ಪಡೆಯುತ್ತವೆ ಎಂಬುದಕ್ಕೆ ಈ ಕೆಲ ವಿಷಯಗಳನ್ನು ಗಮನಿಸಿ. 

ನಾವು ಉಣ್ಣುವ ಆಹಾರದಲ್ಲಿ 'ಭಕ್ತಿ' ಹೊಕ್ಕರೆ 
ಅದು ' ಪ್ರಸಾದ' ವಾಗುತ್ತದೆ..... 

ನಮ್ಮ ಹಸಿವಿಗೆ 'ಭಕ್ತಿ' ಹೊಕ್ಕರೆ 
ಅದು ' ಉಪವಾಸ' ವಾಗುತ್ತದೆ......  

ನಾವು 'ಭಕ್ತಿ' ಕುಡಿದರೆ 
ಅದು 'ಚರಣಾಮೃತ' ವಾಗುತ್ತದೆ......  

ನಮ್ಮ ಪ್ರಯಾಣ ' ಭಕ್ತಿ' ಪೂರ್ಣವಾದರೆ
ಅದು ' ತೀರ್ಥಯಾತ್ರೆ' ಯಾಗುತ್ತದೆ.......   

ನಾವು ಹಾಡುವ ಸಂಗೀತ' ಭಕ್ತಿ' ಮಯವಾದರೆ 
ಅದು 'ಕೀರ್ತನೆ'ಯಾಗುತ್ತದೆ...... 
 
ನಮ್ಮ ವಾಸದ ಮನೆಯೊಳಕ್ಕೆ' ಭಕ್ತಿ ' ತುಂಬಿದರೆ 
ನಮ್ಮ ಮನೆಯೇ ' ಮಂದಿರ ' ವಾಗುತ್ತದೆ....... 
 
ನಮ್ಮ ಕ್ರಿಯೆ ' ಭಕ್ತಿ' ಪೂರಿತವಾದರೆ 
ನಮ್ಮ ಕಾರ್ಯಗಳು ' ಸೇವೆ' ಯಾಗುತ್ತದೆ.....  

ನಾವು ಮಾಡುವ ಕೆಲಸದಲ್ಲಿ' ಭಕ್ತಿ ' ಇದ್ದರೆ
ಅದು ನಮ್ಮ ' ಕರ್ಮ ' ವಾಗುತ್ತದೆ.....  

ನಮ್ಮ ಹೃದಯದಲ್ಲಿ ' ಭಕ್ತಿ ' ತುಂಬಿದರೆ 
ನಾವು ಮಾನವರಾಗುತ್ತೇವೆ..... 

ನಮ್ಮ ವಿಚಾರವಿನಿಮಯದಲ್ಲಿ ' ಭಕ್ತಿ' ಇದ್ದರೆ
ಅದು ' ಸತ್ಸಂಗ' ವಾಗುತ್ತದೆ....

🙏 ಸರ್ವೇಜನ ಸುಖಿನೋಭವಂತು🙏

ರಂಗೋಲಿ

ರಂಗೋಲಿಗೆ ಹಳೆಯ ತಲೆಮಾರಿಂದ ಬಂದ ಒಂದು ಚಿಕ್ಕ ಕಥೆ ಇದು.

ಆಯುಷ್ಯ ಮುಗಿದೊಡನೆ ಜೀವಾತ್ಮವನ್ನು ಕರೆದೊಯ್ಯಲು ಭೂಮಿಗೆ ಬರುವ ಯಮಧರ್ಮರಾಜ, ಒಮ್ಮೆ ಪತಿವ್ರತೆಯೊಬ್ಬಳ ಪತಿಯ ಪ್ರಾಣವನ್ನು ಕೊಂಡೊಯ್ಯಲು ಸೂರ್ಯ ಹುಟ್ಟುವ ವೇಳೆಗೇ ಪ್ರತ್ಯಕ್ಷನಾದನಂತೆ.

ಅಷ್ಟೊತ್ತಿಗಾಗಲೇ, ಸ್ನಾನ ಮಾಡಿ, ಮನೆಯ ಮುಂದೆ ಕಸ ಗುಡಿಸಿ, ಸಾರಿಸಿ ಸುಂದರವಾಗಿ ರಂಗೋಲಿ ಇಟ್ಟಿದ್ದ ಸಾಧ್ವಿಯ ಕಂಡು ಕಠೋರ ಹೃದಯದ ಯಮನ ಹೃದಯವೂ ಕರಗಿತಂತೆ. ಆಕೆ ಮನೆಯ ಮುಂದೆ ಹಾಕಿದ್ದ ಆ ರಂಗೋಲಿ ಯಮನನ್ನೂ ಆಕರ್ಷಿಸಿತ್ತಂತೆ.

ರಂಗೋಲಿಯ ಕಂಡು ಪ್ರಸನ್ನನಾದ ಯಮದೇವ “ವತ್ಸೆ ನಾನು ನಿನ್ನ ಪತಿಯ ಪ್ರಾಣ ಕೊಂಡೊಯ್ಯಲೆಂದೇ ಬಂದಿದ್ದೆ.

ನಿನ್ನ ಈ ಸುಂದರ ರಂಗೋಲಿ ನನ್ನನ್ನು ಆಕರ್ಷಿಸಿದೆ.“ ಸೂರ್ಯೋದಯಕ್ಕೆ ಮೊದಲೇ ಎದ್ದು ಮನೆಯ ಮುಂದೆ ರಂಗೋಲಿ ಹಾಕುವ ಮನೆಯನ್ನು ನಾನು ಪ್ರವೇಶಿಸುವುದಿಲ್ಲ ಎಂದು ಆಕೆಗೆ ವರ ಇತ್ತನಂತೆ.

ಅದಕ್ಕೇ ಅಂದಿನಿಂದ ಇಂದಿನ ವರೆಗೆ ಭಾರತ ನಾರಿಯರು ಸೂರ್ಯೋದಯಕ್ಕೆ ಮೊದಲೇ ಎದ್ದು, ಮನೆಯ ಮುಂದೆ ರಂಗೋಲಿ ಹಾಕುತ್ತಾರಂತೆ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
ರಾಮಸೀತಲಕ್ಷ್ಮಣಹನುಮನಿರುವ ರಂಗವಲ್ಲಿ...🙏🙏🙏🙏🙏🙏

ವಿಷ್ಣು ಹೇಗೆ ತನ್ನ ಆಯುಧವಾದ 'ಸುದರ್ಶನ ಚಕ್ರ'ವನ್ನು ಪಡೆದನು

ಸದಾಶಿವನು ಹರಿಗೆ ಸುದರ್ಶನ ಚಕ್ರ ನೀಡುತ್ತಿರುವ ಚಿತ್ರ . 

ಗೋವಾ ರಾಜ್ಯದ ಶ್ರೀ ಶಾಂತಾದುರ್ಗಾ ದೇವಾಲಯದಲ್ಲಿ ಕಂಡುಬರುವುದು .

ವಿಷ್ಣು ಹೇಗೆ ತನ್ನ ಆಯುಧವಾದ 'ಸುದರ್ಶನ ಚಕ್ರ'ವನ್ನು ಪಡೆದನು?*  

ಶಿವ ಪುರಾಣದ ಪ್ರಕಾರ, ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟಶಕ್ತಿಗಳಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿಶಾಲಿಯಾದ ಆಯುಧ ಹೊಂದಲು ಬಯಸಿದನು.

ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಿಂದ ಶಿವನನ್ನು ಪೂಜೆ ಮಾಡಿ ವರವನ್ನು ಕೋರುವುದಾಗಿ ತೀರ್ಮಾನ ಮಾಡಿದನು.

ವಿಷ್ಣು ಪೂಜೆಗೆ ಅಗತ್ಯವಿದ್ದ ಸಾಮಾಗ್ರಿಗಳೊಂದಿಗೆ, ಒಂದು ಸಾವಿರ ಕಮಲದ ಹೂಗಳನ್ನು ಸಂಗ್ರಹಿಸಿ ಪೂಜೆ ಪ್ರಾರಂಭಿಸಿದನು.  

ಆದರೆ ಪೂಜೆ ಕೊನೆಗೊಳ್ಳುವ ವೇಳೆಯಲ್ಲಿ ಒಂದು ಹೂವು ಕಡಿಮೆ ಇರುವುದು ವಿಷ್ಣುಗೆ ತಿಳಿಯಿತು.

ತನ್ನ ಪ್ರಾರ್ಥನೆಯನ್ನು ನಿಲ್ಲಿಸದೆ, ಪೂಜೆಗೆ ತಡೆಬಾರದಂತೆ ಹೂವಿನ ಬದಲಾಗಿ ವಿಷ್ಣು ಶಿವನಿಗಾಗಿ ತನ್ನ ಕಣ್ಣನ್ನು ಕಿತ್ತು ಹೂವಿನಂತೆ ಪೂಜೆಯಲ್ಲಿ ಕೊನೆಯ ಕಮಲದ ಹೂವಾಗಿ ಅರ್ಪಿಸಿದನು. 

ಕಮಲದ ಹೂವಿನ ಬದಲಾಗಿ ತನ್ನ ಕಣ್ಣನೇ ಕೊಟ್ಟ ವಿಷ್ಣುಗೆ 'ಪದ್ಮಾಕ್ಷ' ಎಂಬ ಹೆಸರು ಬಂತು. (ಪದ್ಮ ಅಂದರೆ ಕಮಲ ಹಾಗು ಅಕ್ಷಿ ಅಂದರೆ ಕಣ್ಣು ಎಂದು)

ಶಿವನು ಈ ತೀವ್ರವಾದ ಭಕ್ತಿಯನ್ನು ಮೆಚ್ಚಿ, ತಕ್ಷಣ ವಿಷ್ಣು ದೇವನಿಗೆ ಬಯಸಿದ್ದನ್ನು ವರವಾಗಿ ನೀಡುವುದಾಗಿ ತಿಳಿಸಿದರು.

ವಿಷ್ಣು ಅಸುರರನ್ನು ನಾಶ ಮಾಡಲು ಸಹಾಯವಾಗುವ ಒಂದು ಶಸ್ತ್ರದ ಅಗತ್ಯವನ್ನು ವ್ಯಕ್ತಪಡಿಸಿದನು.

ಶಿವನು ವಿಷ್ಣುಗೆ ಸುದರ್ಶನ ಚಕ್ರವನ್ನು ವರವಾಗಿ ನೀಡಿದನು.

ಶಿವನ ಅಂಗುಷ್ಠದಿಂದ ಸೃಷ್ಟಿಸಲಾದ ಒಂದು ಪ್ರಬಲವಾದ ಶಸ್ತ್ರವೇ ಈ ಸುದರ್ಶನ ಚಕ್ರ. 

ರಾಕ್ಷಸ ಜಲಂಧರನನ್ನು ಈ ಅಸ್ತ್ರದಿಂದ ನಾಶ ಮಾಡಲಾಯಿತು. 

ಈ ಸುದರ್ಶನ ಚಕ್ರದಲ್ಲಿ ಎರಡು ವಿರುದ್ಧ ದಿಕ್ಕಿನಲ್ಲಿ ಚಲಿಸುವ, ಹತ್ತು ದಶಲಕ್ಷ ಮುಳ್ಳಿನ ಇರಿಗಳು ಸದಾ ಕಾಲ ಸುತ್ತು ಹೊಡೆಯುತ್ತಿರುತ್ತದೆ.

ಈ ಶಸ್ತ್ರ ಶತ್ರುವಿನ ಕಡೆಗೆ ಎಸೆಯುವುದಷ್ಟೆ ಅಲ್ಲ, ಇದು ಸಂಪೂರ್ಣವಾಗಿ ಮನೋನಿಶ್ಚಯದಿಂದ ಪ್ರಯೋಗಿಸಿ, ಶತ್ರುವನ್ನು ಅಟ್ಟಿಸಿಕೊಂಡು ಹಿಂಬಾಲಿಸುವ ಅಸ್ತ್ರವಾಗಿದೆ. 

ವಿಷ್ಣುವಿನ ಎಲ್ಲಾ ಶತ್ರುಗಳನ್ನು, ಅವರು ಸಂಖ್ಯೆ ಎಷ್ಟೇ ಇದ್ದರು - ವಶಪಡಿಸಿಕೊಳ್ಳಲು ಸಹಾಯ ಮಾಡುವುದ ಈ ಒಂದು ಶಸ್ತ್ರ.

ಈ ಅಸ್ತ್ರ ಎಷ್ಟು ಪ್ರಬಲವಾದದ್ದು ಎಂದರೆ, ಇದನ್ನು ಕೂಡ ಒಂದು ದೇವರಂತೆ ಪೂಜಿಸಲಾಗುತ್ತದೆ.

ವಾಸ್ತವವಾಗಿ, ಸುದರ್ಶನ ಹೋಮ ದಕ್ಷಿಣ ಭಾರತದ ಅನೇಕ ವಿಷ್ಣು ದೇವಾಲಯಗಳಲ್ಲಿ ಮತ್ತು ಶಿವನ ದೇವಸ್ಥಾನಗಳಲ್ಲಿ ಅತ್ಯಂತ ಜನಪ್ರಿಯ ಹೋಮ ಆಗಿದೆ
ಸುದರ್ಶನ ಚಕ್ರ! 

ಸುದರ್ಶನ ಎಂಬ ಪದವು ಎರಡು ಪದಗಳಿಂದ ಆಗಿದೆ. ಸು ಮತ್ತು ದರ್ಶನ. ಸು ಎಂದರೆ ಮಂಗಳಕರವಾದುದು. ದರ್ಶನ ಎಂದರೆ ಕಾಣುವುದು. 

ಸುದರ್ಶನ ಚಕ್ರ ಎಂಬುದು ವಿಷ್ಣುವಿನ ಆಯುಧ. ಈ ಆಯುಧವನ್ನು ವಿಷ್ಣು ದುಷ್ಟ ಸಂಹಾರಕ್ಕಾಗಿ ಬಳಸುತ್ತಿದ್ದ. ಇದರ ಮೂಲದ ಬಗ್ಗೆ ಹಲವು ಕಥೆಗಳಿವೆ. ಒಂದು ಕಥೆಯ ಪ್ರಕಾರ ಬ್ರಹ್ಮ, ವಿಷ್ಣು, ಮಹೇಶ್ವರ ಮೂವರ ಸಂಯೋಜನೆ ಶಕ್ತಿಯಿಂದ ಸುದರ್ಶನ ಚಕ್ರವು ಸೃಷ್ಟಿಯಾಯಿತು.

 ಆಯಾ ಕಥೆಗೆ ಅನುಸಾರವಾಗಿ ಸುದರ್ಶನ ಚಕ್ರದಲ್ಲಿ 6,12 ಅಥವಾ 27 ಮಾನಚಾದ ಆರೆಗಳಿವೆ ಎನ್ನಲಾಗುತ್ತದೆ. ಪ್ರತಿಯೊಂದು ಆರೆಯು ಪುರುಷ ಮತ್ತು ಸ್ತ್ರೀ ತತ್ವವನ್ನು ಹೇಳುತ್ತವೆ. ಸೂರ್ಯನಂತೆ ಬೆಳಕು ಗೋಚರಿಸುತ್ತದೆ. ಮೋಕ್ಷ ಸಾಧನೆಯ ಕಠಿಣ ಹಾದಿಯಲ್ಲಿ ಸಾಗಲು ಭಕ್ತರಿಗೆ ನೆರವಾದ ಕಾರಣದಿಂದ ಸುದರ್ಶನ ಚಕ್ರವನ್ನು ದೇವರ ರೊಪದಲ್ಲಿಯು ಪೂಜಿಸಲಾಗಿತ್ತು.

 ಸುದರ್ಶನ ಹೋಮ ಮಾಡುವುದರಿಂದ ಮನೆ ಮತ್ತು ಕೆಲಸದ ಸ್ಥಳ ಗಳಲ್ಲಿ ಇರುವ ಕೆಟ್ಟ ಶಕ್ತಿಯನ್ನು ಹೊಡೆ ದೋಡಿಸಬಹುದು ಎಂಬ ನಂಬಿಕೆಯಿದೆ.

*"ಶ್ರೀ ಸುದರ್ಶನ ಸ್ತೋತ್ರ" ಮತ್ತು ವಿಶೇಷತೆಗಳು* 

"ಹದಿನಾಲ್ಕು ಲೋಕಗಳಿಗೂ ಒಡೆಯರಾದ 
" ಶ್ರೀ ಲಕ್ಷ್ಮೀನಾರಾಯಣ" ರು ಆಯುಧಗಳಲ್ಲಿ   ಚಕ್ರಗಳಿಗೇ ರಾಜನಾದ 
"ಶ್ರೀ ಸುದರ್ಶನ" ಚಕ್ರವನ್ನು ಹೊಂದಿದ್ದಾರೆ ಎಂದರೆ "ಶ್ರೀ ಸುದರ್ಶನ" ಚಕ್ರದ ಮಹಿಮೆ ಎಷ್ಟಿರಬಹುದು ಅಲ್ಲವೇ..!

ಸುದರ್ಶನ ಚಕ್ರಕ್ಕೆ ಎದುರು ನಿಂತು ಬದುಕಿ ಉಳಿದವರು ಯಾರೂ ಇಲ್ಲ..
"ಶ್ರೀ ಸುದರ್ಶನ ಚಕ್ರದ ಮುಖ್ಯ ಉದ್ಧೇಶ "ದುಷ್ಟ ಶಿಕ್ಷಣೆ, ಶಿಷ್ಠ ರಕ್ಷಣೆ, ಅಧರ್ಮಿಗಳ ನಾಶ..!

" ಶ್ರೀ ಸುದರ್ಶನ ಪೂಜೆಯನ್ನು ಹಲವಾರು ರೀತಿಯಲ್ಲಿ ಮಾಡುತ್ತಾರೆ..

೧. ಶ್ರೀ ಸುದರ್ಶನ ಚಕ್ರ ಪೂಜೆ,
೨. ಶ್ರೀ ಸುದರ್ಶನ ಸಾಲಿಗ್ರಾಮ ಪೂಜೆ..
೩. ಶ್ರೀ ಸುದರ್ಶನ ಆರಾಧನೆ ಪೂಜೆ.
೪. ವಿಗ್ರಹ ಪೂಜೆ..

"ಶ್ರೀ ಸುದರ್ಶನ" ಚಕ್ರಪೂಜೆಯಲ್ಲಿ ಹಲವಾರು ತರಹ ಇದೆ..

೧. ಎಲ್ಲರೂ ಮಾಡುವಂತಹ ಸಾಮಾನ್ಯ ಪೂಜೆ..
೨. ಶ್ರೀ ಸುದರ್ಶನ ಸದಾಚಾರ ಪೂಜೆ..
೩. ಶ್ರೀ ಸುದರ್ಶನ ವಾಮಾಚಾರ ಪೂಜೆ..
೪. ಶ್ರೀ ಸುದರ್ಶನ ಶನಸಾತ್ವಿಕ ಪೂಜೆ..
೫. ಶ್ರೀ ಸುದರ್ಶನ ರಾಜಸ ಪೂಜೆ..
೬. ಶ್ರೀ ಸುದರ್ಶನ ತಾಮಸ ಪೂಜೆ..

ತುಂಬಾ ಇದೆ ..

ಪ್ರಸ್ತುತ "ಶ್ರೀ ಸುದರ್ಶನ" ಚಕ್ರ ಸ್ತೋತ್ರದ ಬಗ್ಗೆ ತಿಳಿದುಕೊಳ್ಳೋಣ..

"ಶ್ರೀ ಸುದರ್ಶನ " ಚಕ್ರ ಸ್ತೋತ್ರವನ್ನು ಓದಿದರೆ ಏನು ಫಲ, ..?

೧. ಯಾರಿಗೆ ಓದುವಾಗ ಜ್ಞಾಪಕವಿದ್ದು ನಂತರ ಮರೆತುಹೋಗುತ್ತಾರೋ ಅಂಥವರು ಓದಿದರೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ..

೨. ಯಾರಿಗೆ ಮತ್ತು ಯಾರ ಮನೆಯಲ್ಲಿ ಮಾಂತ್ರಿಕ ದೋಷಗಳಿದ್ದರೆ ಅಂಥವರು ಓದಿದರೆ ಮಾಂತ್ರಿಕ ದೋಷ ಪೂರ್ಣವಾಗಿ ನಿವಾರಣೆಯಾಗುತ್ತದೆ..

೩. ಯಾರಿಗೆ ವೈದ್ಯರಿಂದಲೂ ವಾಸಿಯಾಗದ ಖಾಯಿಲೆಗಳಿದ್ದರೆ , ಅಂತವರು ಓದಿದರೆ ಬಹಳ ಬೇಗ ಆರೋಗ್ಯಭಾಗ್ಯ ಪಡೆಯುತ್ತಾರೆ..

೪. ವಿವಾಹಕ್ಕಿರುವ ಅಡೆತಡೆಗಳೆಲ್ಲಾ ನಿವಾರಣೆಯಾಗಿ ಬಹಳ ಬೇಗ ವಿವಾಹವಾಗುತ್ತದೆ..

೫. ಯಾರ ಮನೆಯಲ್ಲಿ ವಿವಾಹವಾದ ಮೇಲೆ ಪ್ರತಿದಿನವೂ ಮನೆಯಲ್ಲಿ ಜಗಳ ಆಡುತ್ತಿದ್ದರೆ, ಮನೆಯಲ್ಲಿ ಶಾಂತಿ ನೆಮ್ಮದಿ ಇಲ್ಲದಿದ್ದರೆ, ಇಂಥವರು ಓದಿದರೆ ಮನೆಯಲ್ಲಿ ಬಹಳ ಶಾಂತಿದೊರೆತು ನೆಮ್ಮದಿಯಿಂದ ಜೀವನ ಮಾಡುತ್ತಾರೆ..

೬. ಯಾರಿಗೆ ತುಂಬಾ ಸಿಟ್ಟು, ಕೋಪ, high BP, ಸಿಡುಕುವ ಸ್ವಭಾವ ಇದ್ದವರು ಓದಿದರೆ , ಮನಸ್ಸಿಗೆ ನೆಮ್ಮದಿ ದೊರೆತು ಶಾಂತಿಯ ಜೀವನ ನಡೆಸುತ್ತಾರೆ..

೭. ನೂತನವಾಗಿ ಕಟ್ಟಿಸಿದ ಮನೆಯ ಗೃಹಪ್ರವೇಶ ಕಾಲದಲ್ಲಿ "ಶ್ರೀ ಸುದರ್ಶನ" ಸ್ತೋತ್ರದಿಂದ ಹೋಮ ಮಾಡಿದರೆ ಮನೆಯು ತುಂಬಾ ಅಭಿವೃದ್ಧಿಯಾಗಿ ಬಹಳ ಶ್ರೇಯಸ್ಸಾಗುತ್ತದೆ..

೮. ಹೆಣ್ಣು ಮಕ್ಕಳು 15 ವರ್ಷವಾದ ನಂತರವೂ  ಋತುಮತಿಯಾಗದೇ ಇದ್ದರೆ ,ಅಂಥವರು ಓದಿದರೆ   ಬಹಳ ಬೇಗ ಋತುಮತಿಯಾಗುತ್ತಾರೆ..

ವಿಶೇಷ ವಿಷಯ : ಕೆಲವು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ, ತುಂಬಾ ಅನಾರೋಗ್ಯ, ಫಿಡ್ಸ್ ತರಹದ ಖಾಯಿಲೆ, ವಿಚಿತ್ರ ಖಾಯಿಲೆಗಳು ಬಂದಿರುತ್ತವೆ, ಅಂಥವರು ಶ್ರೀ ಸುದರ್ಶನ ದೇವರ ಪೂಜೆ ಮಾಡಿ, ನಂತರ "ಶ್ರೀ ಆಂಜನೇಯ ಸ್ವಾಮಿ ಪೂಜಿಸಿದರೆ ಅಥವಾ ಹರಕೆ ಮಾಡಿಕೊಂಡರೆ, ೩ ತಿಂಗಳೊಳಗಾಗಿ ಮಗು ಆರೋಗ್ಯದಿಂದ ಇದ್ದು ದೇಹವು ವಜ್ರಕಾಯವಾಗುತ್ತದೆ..

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು)

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 

ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

 
ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.
ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು
ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
 
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||

ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು

🕉*ನೀರು ತುಂಬುವ ಹಬ್ಬದ ದಿನ ಏನು ಮಾಡಬೇಕು?*

1) ಹಂಡೆತುಂಬಿ ಕಾಯಿಸಿ ಸ್ನಾನ ಮಾಡುವ ಅನುಕೂಲ ಇದ್ದವರು ಅದನ್ನು ತಿಕ್ಕಿ ತೊಳೆದು ಅಲಂಕರಿಸಿ ಶುದ್ಧವಾದ ನೀರನ್ನು ಮುಕ್ಕಾಲು ಭಾಗ ತುಂಬಿ ಇಡಿ.

2) ಅನಂತರ ಬಾವಿ ಇದ್ದವರು ತಮ್ಮ ಮನೆಯ ಸಂಪ್ರದಾಯದಂತೆ ನೀರು ಸೇದಿ ತಂದು ಒಂದು ಕಲಶದಲ್ಲಿ ದೇವರ ಕೊಣೆಯೊಳಗೋ ಹೊರಗೋ ಶುದ್ಧವಾದ ಜಾಗದಲ್ಲೋ ಇಡಿ

3) ತಂಡುಲಾಕ್ಷತೆ, ಹೂವು, ಹಣ್ಣು , ಗಂಧ, ಅರಸಿಣ ಪುಡಿ, ಕುಂಕುಮ ಇತ್ಯಾದಿ ಸಿದ್ಧಪಡಿಸಿ.

4) ಮಂತ್ರಾಕ್ಷತೆ , ಹೂವು ಕೈಯಲ್ಲಿ ಹಿಡಿದು ನೀರು ತುಂಬಿದ ಕಲಶದಲ್ಲಿ ತನ್ನ ಅಂಗುಷ್ಟದಿಂದ ಗಂಗೆಗೆ ಜನ್ಮವಿತ್ತ ರಮಾಪತಿ ತ್ರಿವಿಕ್ರಮನನ್ನು ಅವಾಹಿಸಿ.
*ಮಮ ಗುರ್ವಂತರ್ಗತ ವರುಣಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಗಂಗಾಜನಕಂ ರಮಾಸಹಿತ ತ್ರಿವಿಕ್ರಮಂ ಆವಾಹಯಾಮಿ. ಪ್ರಸೀದ ಪ್ರಸೀದ ಭಗವನ್ ಆಗಚ್ಛ ಆಗಚ್ಛ*
ಎಂದು ಕಲಶದಲ್ಲಿ ಹೂವು ಅಕ್ಷತೆ ಹಾಕಿ.
ನಂತರ ಆಸನ, ಅರ್ಘ್ಯ, ಪಾದ್ಯ, ಆಚಮನ, ಮಧುಪರ್ಕ, ಸ್ನಾನ, ವಸ್ತ್ರ, ಯಜ್ನೋಪವೀತ, ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ, ತಾಂಬೂಲ, ಮಂಗಲಾರತಿ, ಮಂತ್ರಪುಷ್ಪ, ನಮಸ್ಕಾರ ಅರ್ಪಿಸಿ.

5) ನಂತರ ಅಕ್ಷತೆ ಹೂವು ಕೈಯಲ್ಲಿ ಹಿಡಿದುಕೊಂಡು ಕಲಶದಲ್ಲಿ ಗಂಗಾದೇವಿಯನ್ನು ಅವಾಹಿಸಿ. .
*ಗಂಗೇ ಚ ಯಮುನೇ ಕೃಷ್ಣೇ ಗೋದಾವರೀ ಸರಸ್ವತೀ*|
*ನರ್ಮದೇ ಸಿಂಧು ಕಾವೇರೀ ಜಲೇ$ಸ್ಮಿನ್ ಸನ್ನಿಧಿಮ್ ಕುರು||*
ಕಲಶಮಧ್ಯೆ ತ್ರಿವಿಕ್ರಮ ರೂಪಿಣಃ ಪುತ್ರಿಮ್ ಗಂಗಾಂ ಆವಾಹಯಾಮಿ
ಎಂದು ಅಕ್ಷತೆ ಹೂವು ಹಾಕಿ ಮುಂದಿನ ಮಂತ್ರಗಳಿಂದಲೂ ಕಲಶದಲ್ಲಿ ಅಕ್ಷತೆ ಹಾಕಿ
*ಭೂ: ಗಂಗಾಂ ಆವಾಹಯಾಮಿ, ಭುವಃ ಗಂಗಾಂ ಆವಾಹಯಾಮಿ, ಸ್ವ: ಗಂಗಾಂ ಆವಾಹಯಾಮಿ, ಭೂರ್ಭುವಸ್ವ: ಗಂಗಾಂ ಆವಾಹಯಾಮಿ.*

ಆ ನಂತರ ಮೇಲೆ ಹೇಳಿದಂತೆ ಅಸನದಿಂದ ವಸ್ತ್ರವನ್ನು ಅರ್ಪಿಸಿ ಹರಿದ್ರಾ, ಕುಂಕುಮ, ಗಂಧ , ಪುಷ್ಪ ಅರ್ಪಿಸಿ

6) ಈ ಕೆಳಗಿನ ನಾಮಗಳಿಂದ ಅಕ್ಷತೆ ಹಾಕಿ
*ನಂದಿನ್ಯೈ ನಮಃ, ನಲಿನ್ಯೆ ನಮಃ, ಸೀತಾಯೈ ನಮಃ , ಮಾಲತ್ಯೈ ನಮಃ , ಮಲಾಪಹಾಯೈ ನಮಃ, ವಿಷ್ಣುಪಾದಾಬ್ಜ ಸಂಭೂತಾಯೈ ನಮಃ, ಗಂಗಾಯೈ ನಮಃ, ತ್ರಿಪಥಗಾಮಿನ್ಯೈ ನಮಃ , ಭಾಗೀರಥ್ಯೈ ನಮಃ, ಭೋಗವತ್ಯೈ ನಮಃ, ಜಾಹ್ನವ್ಯೈ ನಮಃ, ತ್ರಿದಶೇಶ್ವರ್ಯೈ ನಮಃ, ಗಂಗಾಭಾಗೀರಥ್ಯೆ ನಮಃ*

7) ಧೂಪವನ್ನು ತೋರಿಸಿ
*ವನಸ್ಪತ್ಯುದ್ಭವೋ ದಿವ್ಯೋ ಗಂಧಾಢ್ಯೋ ಗಂಧ ಉತ್ತಮಃ* |
*ಆಘ್ರೇಯಃ ಸರ್ವದೇವಾನಾ೦ ಧೂಪೋ$ಯಂ ಪ್ರತಿಗೃಹ್ಯತಾಮ್* ||

😎 *ಸಾಜ್ಯ೦ ತ್ರಿವರ್ತಿಸಂಯುಕ್ತ೦ ವಹ್ನಿನಾ ದ್ಯೋತಿತಂ ಮಯಾ|*
*ದೀಪಂ ಗೃಹಾಣ ದೇವೇಶ ತ್ರೈಲೋಕ್ಯತಿಮಿರಾಪಹ*||
ಎನ್ನುತ್ತಾ ಮೂರು ಬತ್ತಿಯ ಆರತಿ ತೋರಿಸಿ ನಂದಿಸಿ

9) ಹಣ್ಣು ಕಾಯಿ ಮತ್ತು ಅನುಕೂಲ ಇದ್ದಲ್ಲಿ ಇತರ ನೈವೇದ್ಯಗಳನ್ನು ಮೊದಲು ತ್ರಿವಿಕ್ರಮ ದೇವರಿಗೆ ಅರ್ಪಿಸಿ ಅನಂತರ ರಮಾದೇವಿ , ಮುಖ್ಯಪ್ರಾಣ ದೇವರಿಗೆ ಅರ್ಪಿಸಿ. ಇದರೊಳಗಿಂದ ಸ್ವಲ್ಪ ಬೇರೊಂದು ತಟ್ಟೆಯಲ್ಲಿ ಬಡಿಸಿ ಭಾಗೀರಥಿ ದೇವಿಗೆ ಅದನ್ನು ನಿವೇದಿಸಿ.

10) ತದನಂತರ ಕರ್ಪೂರ ಹಾಕಿ ಮಹಾಮಂಗಳಾರತಿ ಮೊದಲು ತ್ರಿವಿಕ್ರಮ ದೇವರು ನಂತರ ರಮಾದೇವಿ ಪ್ರಾಣದೇವರಿಗೆ ತೋರಿಸಿ ಭಾಗೀರಥಿಗೆ ತೋರಿಸಿ.

11) *ನಾರಾಯಣಾಯ ವಿದ್ಮಹೇ ವಾಸುದೇವಾಯ ದೀಮಹಿ ತನ್ನೋ ವಿಷ್ಣು: ಪ್ರಚೋದಯಾತ್*
ಎನ್ನುತ್ತಾ ತ್ರಿವಿಕ್ರಮ ದೇವರಿಗೆ ಮಂತ್ರಪುಷ್ಪಾ೦ಜಲಿ ಅರ್ಪಿಸಿ.

12) ಭಾಗೀರಥೀ ದೇವಿಯನ್ನು ಪ್ರಾರ್ಥಿಸಿ.
*ಹೇ ಗಂಗೇ! ತವ ಕೋಮಲಾಂಘ್ರಿ* *ನಲಿನಂ ರಂಭೋರು ನೀವಿಲಸತ್*
*ಕಾಂಚೀದಾಮ ತನೂದರಂ ಘನಕುಚ ವ್ಯಾಕೀರ್ಣಹಾರಂ ವಪು:* |
*ಸನ್ಮುದ್ರಾ೦ಗದ ಕಂಕಣಾವೃತಕರ೦* *ಸ್ಮೇರಂ ಸ್ಫುರತ್ಕುಂಡಲಂ*
*ಸಾರಂಗಾಕ್ಷಿ ಜಲಾನ್ಯದಿಂದುರುಚಯೇ ಜಾನಂತಿ ತೇ$ನ್ಯೇ ಜಲಾತ್ |*
ಪ್ರಾರ್ಥನಾಂ ಸಮರ್ಪಯಾಮಿ ಎನ್ನುತ್ತ ಅಕ್ಷತೆ ಹಾಕಿ ನಮಸ್ಕರಿಸಿ.

13) ತದನಂತರ
ಯಸ್ಯ ಸ್ಮೃತ್ಯಾ ಶ್ಲೋಕ ಹೇಳಿ
ಅನೇನ ಅಸ್ಮದ್ ಗುರ್ವಂತರ್ಗತ ಭಾರತೀರಮಣ ಮುಖ್ಯಪ್ರಾಣಾ೦ತರ್ಗತ ಗಂಗಾಜನಕ ಶ್ರೀರಮಾತ್ರಿವಿಕ್ರಮ ರೂಪಿ ಶ್ರೀಲಕ್ಷ್ಮೀನಾರಾಯಣ: ಪ್ರೀಯತಾಂ ಪ್ರೀತೋ ಭಾವತು ತತ್ ಸರ್ವಂ ಶ್ರೀಕೃಷ್ಣಾರ್ಪಣಾಮಸ್ತು ಎಂದು ಅರ್ಪಿಸಿ.

14) ಈಗ ಆ ಕಲಶದ ನೀರನ್ನು ಗಂಟೆ, ಜಾಗಟೆ, ಶಂಖಾದಿ ವಾದ್ಯ ಪುರಸ್ಸರ ತುಂಬಿಟ್ಟ ಹಂಡೆಯಲ್ಲಿ ಹಾಕಿ

15) ಸೂರ್ಯಾಸ್ತದ ನಂತರ ಇಂದಿನಿಂದ ಆಕಾಶದೀಪವನ್ನು ಹಚ್ಚಬೇಕು.
ಒಬ್ಬ ಮನುಷ್ಯನ ಎತ್ತರದಷ್ಟು ಒಂದು ಕೋಲನ್ನು ಅಂಗಳದಲ್ಲಿ ನೆಟ್ಟು (ಬಿದಿರಿನ ಕೋಲು ಉಪಯೋಗಿಸಬಾರದು) ಆ ಕೋಲಿನ ತುದಿಯಲ್ಲಿ ಅಷ್ಟದಲ ಕಮಲಾಕಾರದಲ್ಲಿ ಎಂಟು ದಿಕ್ಕುಗಳಲ್ಲಿ ಎಂಟು ದೀಪಗಳನ್ನೂ ಮಧ್ಯೆ ಒಂದು ದೊಡ್ಡ ದೀಪವನ್ನೂ ಹಚ್ಚಬೇಕು. ಎಳ್ಳೆಣ್ಣೆ ಬಿಟ್ಟು ಬೇರೆ ಎಣ್ಣೆ ಉಪಯೋಗಿಸಬಾರದು.
ಇದನ್ನು ಒಂದು ತಿಂಗಳು ಹಚ್ಚಬೇಕು.

16) ಹಾಗೆಯೇ ಮನೆಯ ಹೊರಗೆ ಎತ್ತರದಲ್ಲಿ ಯಮದೇವರಿಗೆ ಕೂಡಾ ಇಂದು ಒಂದು ದೀಪ ಹಚ್ಚಬೇಕು.
****
ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು