ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು)

ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) – 

ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು.  ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.

ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು.  ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ.  ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು.   ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು.   ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು.  ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು  ಬಳಸಿ  ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು .   ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ.   ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ. 

ಎಣ್ಣೆ ಶಾಸ್ತ್ರ  ಮಾಡುವಾಗ ಹೇಳುವ ಮಂತ್ರ –

ಅಶ್ವತ್ಥಾಮಾ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣ: |
ಕೃಪ: ಪರಶುರಾಮಶ್ಚ ಸಪ್ತ್ಯೇತೇ ಚಿರಂಜೀವಿನ: ||
ಎಂದು ಏಳು ಸಲ ಭೂಮಿಗೆ ಮುಟ್ಟಿಸಿ, ಮೂರು ಸಲ ತಲೆಗೂ, ಭೂಮಿಗೂ ಎಣ್ಣೆಯನ್ನು ತಗುಲಿಸಿ, ಅರಿಶಿನ ಕುಂಕುಮಗಳಿಂದ ಪೂಜಿಸಿ ಅಭ್ಯಂಜನ ಸ್ನಾನ ಮಾಡಬೇಕು.

 
ನಂತರ ಎಲ್ಲರಿಗೂ ಆರತಿ ಮಾಡಬೇಕು.  ಆ ಸಮಯದಲ್ಲಿ ಈ ದೇವರನಾಮವನ್ನು ಹಾಡುವ ಕ್ರಮವಿದೆ.
ಎಣ್ಣೆ ಶಾಸ್ತ್ರ ಮಾಡುವ ಸಮಯದಲ್ಲಿ  ಹಾಡುವ ಹಾಡು
ಬಣ್ಣಿಸಿ ಗೋಪಿ ತಾ ಹರಸಿದಳು ||ಪ||
ಎಣ್ಣೆಯನೊತ್ತುತ ಯದುಕುಲ ತಿಲಕಗೆ || ಅ.ಪ.||
ಆಯುಷ್ಯವಂತನಾಗು ಅತಿ ಬಲ್ಲಿದನಾಗು |
ಮಯದ ಖಳರ ಮರ್ಧನನಾಗು |
ರಾಯರ ಪಾಲಿಸು ರಕ್ಕಸರ ಸೋಲಿಸು |
ವಾಯಸುತಗೆ ನೀ ನೊಡೆಯನಾಗೆನುತಲಿ ||1||

ಧೀರನು ನೀನಾಗು ದಯಾಂಬುಧಿಯಾಗು |
ಆ ರುಕ್ಮಿಣಿಗೆ ನೀನರಸನಾಗು |
ಮಾರನ ಪಿತನಾಗು ಮಧುಸೂದನನಾಗು |
ದ್ವಾರಾವತಿಗೆ ನೀ ದೊರೆಯಾಗೆನುತಲಿ ||2||
 
ಆನಂದ ನೀನಾಗು ಅಚ್ಯುತ ನೀನಾಗು |
ದಾನವಾಂತಕನಾಗು ದಯವಾಗು |
ಶ್ರೀನಿವಾಸನಾಗು ಶ್ರೀನಿಧಿ ನೀನಾಗು |
ಜ್ಜಾನಿ ಪುರಂದರ ವಿಠಲನಾಗೆನುತಲಿ ||3||
ಆರತಿ ಹಾಡು

ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||

ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||

ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||

ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||

No comments:

Post a Comment