ಓಂಕಾರ

'ಓಂಕಾರ'

ಓಂಕಾರ ಒಂದು ಬೀಜಾಕ್ಷರ. ಈ ಬೀಜಾಕ್ಷರವನ್ನು ಬಿಡಿಸಿದರೆ ಅದು ಸಮಸ್ತ ಭಾರತೀಯ ತತ್ತ್ವ ಶಾಸ್ತ್ರವನ್ನು ತನ್ನ ಗರ್ಭದಲ್ಲಿ ಧರಿಸಿದೆ ಎನ್ನುವುದು ನಮಗೆ ತಿಳಿಯುತ್ತದೆ. ವೇದದ ಸಾರ 'ಓಂಕಾರ'-ಅದೇ ಪ್ರಣವಃ.

ವೇದಗಳು ಅನೇಕ. ಋಗ್ವೇದದಲ್ಲಿ 24 ಶಾಖೆ, ಯಜುರ್ವೇದದಲ್ಲಿ 101 ಶಾಖೆ, ಸಾಮವೇದದಲ್ಲಿ 1000 ಶಾಖೆ, ಅಥರ್ವವೇದದಲ್ಲಿ 12 ಶಾಖೆ.

 ಹೀಗೆ ಒಟ್ಟು 1137 ಸಂಹಿತೆಗಳು. ಅದಕ್ಕೆ ಅಷ್ಟೇ ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ತುಗಳು. ಹೀಗೆ ವೇದವೆಂದರೆ ವಿಪುಲವಾದ ವೈದಿಕ ವಾಙ್ಮಯ. ಎಷ್ಟೇ ವೇದಗಳಿದ್ದರೂ ಕೂಡಾ, ಮೂಲತಃ ವೇದದಲ್ಲಿ ಪ್ರಮುಖವಾದ ಮೂರು ವಿಭಾಗವಿದೆ. 

ಪದ್ಯರೂಪ(ಋಗ್ವೇದ), ಗದ್ಯರೂಪ(ಯಜುರ್ವೇದ) ಮತ್ತು ಗಾನರೂಪ(ಸಾಮವೇದ). ಈ ಮೂರು ವೇದಗಳ, ಮೂರು ಅಕ್ಷರಗಳನ್ನು ತೆಗೆದುಕೊಂಡು ನಿರ್ಮಾಣವಾಗಿರುವುದು ಓಂಕಾರ. 

“ಓಂಕಾರಕ್ಕೆ ಸಾರತ್ವವನ್ನು ಕೊಟ್ಟು ಸಾರಭೂತನಾಗಿ ‘ಪ್ರಣವಃ’ ಶಬ್ದವಾಚ್ಯನಾಗಿ ನಾನು ಓಂಕಾರದಲ್ಲಿ ನೆಲೆಸಿದ್ದೇನೆ” ಎಂದು ಗೀತೆಯಲ್ಲಿ ಸ್ವಯಂ ಭಗವಂತನೇ ಹೇಳಿದ್ದಾನೆ(ಗೀತಾ-೭-೦೮). 

ಇದು ಬಹಳ ವಿಚಾರಗರ್ಭಿತ ಸಂಗತಿ. ಪ್ರಾಚೀನರು ಮೂರು ವೇದಗಳನ್ನು ಭಟ್ಟಿ ಇಳಿಸಿ, ಅದರ ಸಾರವಾದ ಮೂರು ವರ್ಗಗಳ ಒಂದು ಸೂಕ್ತ ಮಾಡಿದರು.

 ಅದೇ ಪುರುಷಸೂಕ್ತ. ಈ ಕಾರಣದಿಂದ ವೇದಸೂಕ್ತಗಳಲ್ಲೇ ಪುರುಷಸೂಕ್ತ ಅತ್ಯಂತ ಶ್ರೇಷ್ಠವಾದ ಸೂಕ್ತ. ಈ ಸೂಕ್ತವನ್ನು ಮತ್ತೆ ಭಟ್ಟಿಇಳಿಸಿ, ಮೂರು ಪಾದಗಳ ಗಾಯತ್ತ್ರಿ ಮಂತ್ರ(ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್) ನಿರ್ಮಾಣವಾಯಿತು. 

ಇಲ್ಲಿ ‘ತತ್ ಸವಿತುರ್ ವರೇಣ್ಯಂ’ ಋಗ್ವೇದಕ್ಕೆ ಸಂಬಂಧಪಟ್ಟಿದ್ದು, ‘ಭರ್ಗೋ ದೇವಸ್ಯ ಧೀಮಹಿ’ ಯಜುರ್ವೇದಕ್ಕೆ ಸಂಬಂಧಪಟ್ಟಿದ್ದು, ‘ಧೀಯೊ ಯೊ ನಃ ಪ್ರಚೋದಯಾತ್’ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಹೀಗೆ ಮೂರು ವೇದಗಳ ಸಾರ ಗಾಯತ್ತ್ರಿಯ ಮೂರುಪಾದಗಳುಳ್ಳ ಒಂದು ಮಂತ್ರದಲ್ಲಿದೆ. ಇದಕ್ಕಾಗಿ ಗಾಯತ್ತ್ರಿ ಮಂತ್ರವನ್ನು ‘ವೇದಮಾತಾ’ ಎನ್ನುತ್ತಾರೆ. ಈ ಗಾಯತ್ತ್ರಿಯಿಂದ ರಸ ತೆಗೆದಾಗ ಮೂರು ಪಾದಗಳಿಂದ ಮೂರು ಪದಗಳುಳ್ಳ ವ್ಯಾಹೃತಿ: “ಭೂಃ ಭುವಃ ಸ್ವಃ”. ಈ ಮೂರು ಪದಗಳ ಸಾರ ಮೂರು ಅಕ್ಷರದ(ಅ, ಉ, ಮ) ಓಂಕಾರ-ॐ.

ಓಂಕಾರದಲ್ಲಿ ‘ಅ’ಕಾರ ಋಗ್ವೇದಕ್ಕೆ, ‘ಉ’ಕಾರ ಯಜುರ್ವೇದಕ್ಕೆ ಮತ್ತು ‘ಮ’ಕಾರ ಸಾಮವೇದಕ್ಕೆ ಸಂಬಂಧಪಟ್ಟಿದ್ದು. ಋಗ್ವೇದ " ಅಗ್ನಿಮೀ”ಳೇ ಪುರೋಹಿತಂ ಯಜ್ಞಸ್ಯ ದೇವಂ-ಋತ್ವಿಜಂ” | ಹೋತಾ”ರಂ ರತ್ನ ಧಾತಮಂ |..." ಎಂದು ‘ಅ’ ಕಾರದಿಂದ ಪ್ರಾರಂಭವಾಗುತ್ತದೆ. ಮತ್ತು “....ಸಮಾನೀ ವ ಆಕೂತಿಃ ಸಮಾನಾ ಹೃದಯಾನಿ ಹಃ: | ಸಮಾನಮಸ್ತು ವೋ ಮನೋ ಯಥಾ ವಃ ಸುಸಹಾಸತಿ ॥” ಎಂದು ‘ಇ’ಕಾರದಲ್ಲಿ ಕೊನೆಗೊಳ್ಳುತ್ತದೆ.

 ಅಲ್ಲಿಂದ ಮುಂದುವರಿದು ಯಜುರ್ವೇದ “ಇಷೇ ತ್ವೋರ್ಜೆ ತ್ವಾ …” ಎಂದು ‘ಇ’ಕಾರದಿಂದ ಪ್ರಾರಂಭವಾಗಿ “……..ಸಮುದ್ರೋ ಬಂಧುಃ” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಹೀಗೆ ಓಂಕಾರದಲ್ಲಿನ ‘ಅ’ಕಾರ ಮತ್ತು ‘ಉ’ಕಾರ ಋಗ್ವೇದ ಮತ್ತು ಯಜುರ್ವೇದವನ್ನು ಪೂರ್ಣವಾಗಿ ಸೂಚಿಸುವ ಸಂಕ್ಷೇಪಣಾ ರೂಪ. 

ಇಲ್ಲಿಂದ ಮುಂದೆ ಸಾಮವೇದ. ಸಾಮವೇದ “ಅಗ್ನ ಆ ಯಾಹಿ ………” ಎಂದು ‘ಅ’ಕಾರದಿಂದ ಆರಂಭವಾಗಿ “……ಬ್ರ್ಹಸ್ಪತಿರ್ದಧಾತು” ಎಂದು ‘ಉ’ಕಾರದಲ್ಲಿ ಕೊನೆಗೊಳ್ಳುತ್ತದೆ. ಆದ್ದರಿಂದ ಇಲ್ಲಿ ‘ಮ’ ಕಾರ ಬಂದಿಲ್ಲ. 

ಆದರೆ ನಮಗೆ ತಿಳಿದಂತೆ ಸಾಮವೇದ ನಾದ ರೂಪದಲ್ಲಿದೆ. ಓಂಕಾರದಲ್ಲಿ ಕೂಡಾ ‘ಮ’ ಎನ್ನುವುದು ನಾದರೂಪದಲ್ಲಿ ಹೊರ ಹೊಮ್ಮುವ ಅಕ್ಷರ- ಅದು ಸಂಗೀತ. 

ಹೀಗೆ ಓಂಕಾರ ವೇದದ ಸಂಕ್ಷೇಪಣಾರೂಪವಾದ ಬೀಜಾಕ್ಷರ. ಇದು ನಮಗೆ ವೇದವನ್ನು ಗುರುತಿಸುವ ಮಾರ್ಗದರ್ಶಿ. ಆದ್ದರಿಂದ ಇದು ಭಗವಂತನನ್ನು ಸ್ತೋತ್ರ ಮಾಡುವ ಮಂತ್ರಗಳಲ್ಲಿ ಅತ್ಯಂತ ಪ್ರಕೃಷ್ಟವಾದುದ್ದು. ಇದಕ್ಕಿಂತ ದೊಡ್ಡ ಸ್ತೋತ್ರಮಾಡುವ ಶಬ್ದ ಈ ಪ್ರಪಂಚದಲ್ಲಿಲ್ಲ.

ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು

ತುಳಸಿ ವಿವಾಹ

ತುಳಸಿ ವಿವಾಹ:

ಪೂಜೆ ವಿಧಾನ ಮತ್ತು ಮಹತ್ವ 
ದೀಪಾವಳಿ ಹಬ್ಬ ಮುಗಿದ ಬಳಿಕ ಹಿಂದೂಗಳು ಒಂದು ತಿಂಗಳು ಕಾರ್ತಿಕ ಮಾಸವನ್ನು ಆಚರಿಸುತ್ತಾರೆ. ಈ ಕಾರ್ತಿಕ ಮಾಸ ಶಿವನಿಗೆ ಮುಡುಪಾಗಿರುವ ಮಾಸ. ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ಆಚರಿಸುವ ಹಬ್ಬವೇ ತುಳಸಿ ವಿವಾಹ. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ.ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಬ್ಬವನ್ನು ಆಚರಿಸಲಾಗುವುದು. 

ತುಳಸಿ ವಿವಾಹ ಆಚರಣೆಯ ಹಿಂದಿರುವ ಪೌರಾಣಿಕ ಕಥೆ ಈ ಆಚರಣೆಯ ಹಿಂದೆ ಒಂದು ಸುಂದರವಾದ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಗಿಡವಾಗಿ ಪರಿವರ್ತನೆಯಾಗಿರುತ್ತಾಳೆ. ಈಕೆ ಜಲಂಧರನೆಂಬ ಲೋಕಕಂಟಕ ರಾಜನ ಪತ್ನಿಯಾಗಿರುತ್ತಾಳೆ. ಆಕೆಗೆ ಮಹಾವಿಷ್ಣುವಿನ ಪರಮ ಭಕ್ತೆ. ಈಕೆಯ ಪಾತಿವ್ರತ್ಯದ ಫಲವಾಗಿ ಯಾರೂ ಸೋಲಿಸಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾನೆ. ತನ್ನ ಯಾರೂ ಸೋಲಿಸಲಾರರು ಎಂಬ ಅಹಂನಿಂದ ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸುತ್ತಾನೆ. ಈತನ ಉಪಟಳ ಎಲ್ಲೆ ಮೀರಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ವಿಷ್ಣುವಿನ ಬಳಿ ಹೋಗಿ ಸಮಸ್ಯೆಯನ್ನು ನೀಗಿಸುವಂತೆ ಹೇಳುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ಅಗಿದ್ದು ಗೊತ್ತಾಗಿ ವೃಂಧಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಹಾಗೂ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಶಾಪ ನೀಡಿ ತನ್ನ ಪತಿಯ ಚಿತೆಗೆ ಹಾರಿ ದೇಹ ತ್ಯಾಗ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. 
ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ಹಾಗೂ ದಾನವರ ನಡುವೆ ಸಮುದ್ರ ಮಂಥನ ನಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿಯೆಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ತನ್ನ ಪತ್ನಿಯಾಗಿಸುತ್ತಾನೆ ಎಂಬ ಕತೆಯಿದೆ. ಹಿಂದೂಗಳಲ್ಲಿ ತುಳಸಿ ಹಬ್ಬ ಮುಗಿದ ಬಳಿಕ ಮದುವೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. 
ತುಳಸಿ ಹಬ್ಬ ಆಚರಣೆಯ ಮಹತ್ವ :::ಮುತ್ತೈದೆಯರು ತುಳಸಿ ಹಬ್ಬ ಆಚರಣೆ ಮಾಡುವುದರಿಂದ ತನ್ನ ಗಂಡನ ಆರೋಗ್ಯ, ಅಯುಸ್ಸು ಹೆಚ್ಚಾಗುವುದು ಎಂದು ಹೆಳಲಾಗುವುದು. ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ಗಿಡದಲ್ಲಿ ವಿಷ್ಣು ನೆಲಿಸಿರುತ್ತಾನೆ ಎಂಬ ನಂಬಿಕೆ ಇದೆ, ಆದ್ದರಿಂದ ಉತ್ಥಾನ ದ್ವಾದಶಿ ದಿನ ನೆಲ್ಲಿಕಾಯಿ ಗಿಡ ಹಾಗೂ ತುಳಸಿ ಗಿಡಕ್ಕೆ ಪೂಜೆ ಮಾಡಿ ವಿವಾಹ ಆಚರಣೆ ಮಾಡುತ್ತಾರೆ. ಈ ಆಚರಣೆಯಿಂದಾಗಿ ಪತಿಗೆ ಒಳಿತಾಗುವುದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ತುಳಸಿ ವಿವಾಹ ಮಾಡುವುದು ಹೇಗೆ? ಹಿಂದೂಗಳ ಮನೆ ಮುಂದೆ ತುಳಸಿ ಗಿಡವಿದ್ದೇ ಇರುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ತೊಳೆದು ಅದಕ್ಕೆ ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದಷ್ಟೇ ಸಂಭ್ರಮ ಈ ತುಳಸಿ ವಿವಾಹ ಆಚರಣೆಯಲ್ಲೂ ಇರುತ್ತದೆ. ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.
ತುಳಸಿ ವಿವಾಹ ಆಚರಣೆಯ ಮಹತ್ವ :::ತುಳಸಿ ವಿವಾಹ ಆಚರಣೆ ಮಾಡುವವರು ಉಪವಾಸವಿದ್ದು ಈ ಆಚರಣೆ ಮಾಡುತ್ತಾರೆ. ತುಳಸಿ ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸಿ ಅದಕ್ಕೆ ಅಲಂಕರಿಸಿರುತ್ತಾರೆ, ಈ ಮಂಟಪಕ್ಕೆ ಬೃಂದಾವನವೆಂದು ಹೆಸರು. ಈ ಮಂಟಪದಲ್ಲಿ ವೃಂದಾಳ ಆತ್ಮವಿದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ವಿವಾಹ ನೋಡಲು ಬಂದವರು ತುಳಸಿ ಹಾಗೂ ವಿಷ್ಣು ಫೋಟೋ ಅಥವಾ ನೆಲ್ಲಿಕಾಯಿ ಗಿಡವನ್ನು ಅಲಂಕಾರ ಮಾಡಿ ಪೂಜಿಸಿದ ಮಹಿಳೆಯರಿಗೆ ಉಡುಗೊರೆಗಳನ್ನು ನಿಡುವವರು. ತುಳಸಿ ವಿವಾಹದಂದು ಹಬ್ಬದ ಅಡುಗೆಯನ್ನು ಮಾಡಿ ಈ ಹಬ್ಬವನ್ನು ಆಚರಿಸಲಾಗುವುದು. ಹಿಂದೂಗಳು ಈ ಹಬ್ಬ ಅಚರಣೆಯ ಬಳಿಕ ಮದುವೆ ಹಾಗೂ ಗೃಹ ಪ್ರವೇಶವನ್ನು ಮಾಡುತ್ತಾರೆ.

ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ

ಕಾರ್ತಿಕ ಮಾಸದಲ್ಲಿ ತುಪ್ಪದ ದೀಪ ಅರ್ಪಿಸುವ ವೈಭವ
ಸ್ಕಂದ ಪುರಾಣ 
ಶ್ರೀ ಬ್ರಹ್ಮ-ನಾರದಮನಿಗಳ ಸಂವಾದ
1) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನೀಗೆ ತುಪ್ಪದ ದೀಪ ಅರ್ಪಿಸುವುದರಿಂದ ಸಾವಿರಾರು ಜನ್ಮಗಳ ಪಾಪಗಳು ತೊಡೆದುಹೋಗುತ್ತವೆ.
2)ಯಾವುದೇ ಮಂತ್ರ ಪಠಿಸದಿರಬಹುದು, ಪುಣ್ಯ ಕಾರ್ಯ ಮಾಡದಿರಬಹುದು, ಮತ್ತು ಪರಿಶುದ್ಧತೆ ಆಚರಿಸದಿರಬಹುದು, ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಬೆಳಗಿದರೆ ಎಲ್ಲವೂ ಪರಿಪೂರ್ಣತೆ ಹೊಂದುತ್ತದೆ. 
3)ಕಾರ್ತಿಕ ಮಾಸದಲ್ಲಿ ಕೇಶವನಿಗೆ ತುಪ್ಪದ ದೀಪ ಹಚ್ಚುವುದು ಯಜ್ಞಗಳ ಆಚರಣೆ ಮತ್ತು ಎಲ್ಲಾ ನದಿಗಳಲ್ಲಿ ಪವಿತ್ರ ಸ್ನಾನ ಮಾಡುವುದಕ್ಕೆ ಸಮ.
4) ಕಾರ್ತಿಕ ಮಾಸದಲ್ಲಿ ಯಾರಾದರೂ ಶ್ರೀ ಕೇಶವನಿಗೆ ತುಪ್ಪದ ದೀಪ ಅರ್ಪಿಸಿ ಸಂತೃಪ್ತಗೊಳಿದರೆ ಅವರ ಕುಟುಂಬದ ಪೂರ್ವಜರು ಮುಕ್ತಿ ಪಡೆಯುವರು.
5) ಈ ಕಾರ್ತಿಕ ಮಾಸದಲ್ಲಿ ದಾಮೋದರನಿಗೆ ಅಂದರೆ ಕೃಷ್ಣನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಅವರು ವೈಭವಹೊಂದಿ ಅದೃಷ್ಟವಂತರಾಗುವರು.
6) ಯಾರು ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ತುಪ್ಪದ ದೀಪ ಅರ್ಪಿಸಿದರೆ, ಶ್ರೀ ವಾಸುದೇವನು ಅವರಿಗೆ ಒಳ್ಳೆಯ ಫಲಿತಾಂಶ ನೀಡುವನು.
7) ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ಪರಿಹಾರವಾಗದಂತಹ ಪಾಪಗಳು ಮೂರು ಲೋಕಗಳಲ್ಲಿಯೂ ಇಲ್ಲ. 
8) ಈ ಕಾರ್ತಿಕ ಮಾಸದಲ್ಲಿ ಶ್ರೀ ದಾಮೋದರನಿಗೆ ತುಪ್ಪದ ದೀಪ ಅರ್ಪಿಸುವುದರಿಂದ ವ್ಯಕ್ತಿಯು ಯಾವುದೇ ಸಂಕಷ್ಟಗಳಿಲ್ಲದೇ ಶಾಶ್ವತವಾದ ಆಧ್ಯಾತ್ಮಿಕ ಜಗತ್ತನ್ನು ಹೊಂದುವನು.
ಹಿಂದೂಗಳಿಗೆ ಕಾರ್ತಿಕ ಮಾಸ ಮಹತ್ವವಾದದ್ದು 
ಹಾಗೂ ಅಧ್ಯಾತ್ಮ ಸಾಧಕರ ಮಾಸ
ಕಾರ್ತಿಕ ಮಾಸ ಹಬ್ಬಗಳ ಪರ್ವವಷ್ಟೇ ಅಲ್ಲ, ಜ್ಯೋತಿ ಬೆಳಗುವ, ಮನದಲ್ಲಿರುವ ಅಂಧಕಾರವನ್ನು ದೂರ ಮಾಡುವ ಪರ್ವವೂ ಆಗಿದೆ. ಅದರ ಸಂಕೇತವಾಗಿ ಮನೆಯ ಮುಂದೆ ದೀಪ ಬೆಳಗುತ್ತಾರೆ. 
ಕಾರ್ತಿಕ ಮಾಸವು ದೀಪಾವಳಿಯ ನಂತರ ಶುರುವಾಗುತ್ತದೆ. ಕಾರ್ತಿಕ ಪೌರ್ಣಮಿಯಂದು ಚಂದ್ರನ ಬೆಳಕು ಎಂದಿಗಿಂತಲೂ ಪ್ರಕಾಶಮಾನವಾಗಿರುತ್ತದೆ. ಕಾರಣ, ಚಂದ್ರನು ಭೂಮಿಯ ಸಮೀಪದಲ್ಲಿರುತ್ತಾನೆ. ಹಾಗಾಗಿ ಎಂದಿಗಿಂತಲೂ ಶೇ. 7ರಷ್ಟು ಹೆಚ್ಚು ಸೂರ್ಯನ ಬೆಳಕನ್ನು ಚಂದ್ರನು ಪ್ರತಿಫಲಿಸುತ್ತಾನೆ.
ಕಾರ್ತಿಕ ಮಾಸದ ವಿಶೇಷ
ಸೂರ್ಯನು ದ್ವಾದಶ ರಾಶಿಗಳಲ್ಲಿ ಸಂಚರಿಸುತ್ತಾನೆ. ಪ್ರತಿಯೊಂದು ರಾಶಿಯಲ್ಲಿ ಸಂಚರಿಸುವಾಗ ತನ್ನದೇ ಆದ ಪ್ರಭಾವವನ್ನು ಪ್ರತ್ಯೇಕವಾಗಿ ಬೀರುತ್ತಾನೆ. ಅದರ ಪ್ರಭಾವವು ಭೂಮಿಯ, ಭೂಮಿಯ ಪರಿಸರ ಹಾಗೂ ವ್ಯಕ್ತಿಯ ಮೇಲಾಗುತ್ತದೆ. ಕಾರ್ತಿಕ ಮಾಸವು ಮನುಷ್ಯ ಮತ್ತು ದೇವರ ನಡುವಿನ ಸೂಕ್ಷ್ಮ ಪ್ರಜ್ಞೆಯ ಸೇತುವಾಗಿದೆ.
ಇಂತಹ ಸಾಧನೆಯ ಮಾರ್ಗದತ್ತ ಸಾಗಲು ನಮ್ಮ ಋಷಿ ಮುನಿಗಳು ಕೆಲವೊಂದು ಧಾರ್ಮಿಕ ವಿಧಿ, ವಿಧಾನಗಳನ್ನು ಉಲ್ಲೇಖಿಸಿದ್ದಾರೆ. ಅಂತಹ ಋಷಿ ಮುನಿಗಳಲ್ಲಿ ವಸಿಷ್ಠ ಋಷಿಗಳು ಕೆಲವೊಂದು ವಿಧಾನಗಳನ್ನು ಸೂಚಿಸಿದ್ದಾರೆ. ಅದನ್ನು ಅನುಸರಿಸುವ ಮೂಲಕ ನಮ್ಮ ಜೀವನದಲ್ಲಿ ಕೆಲವೊಂದು ಬದಲಾವಣೆಗಳನ್ನು ಕಂಡುಕೊಳ್ಳಬಹುದು.
ಹೀಗೆ ವಸಿಷ್ಠರಿಂದ ವಿಧಿತವಾದ ಐದು ವಿಧಾನಗಳೆಂದರೆ,
. ಪವಿತ್ರ ಸ್ನಾನ 
ಕಾರ್ತಿಕ ಮಾಸದಲ್ಲಿ ಪ್ರತಿನಿತ್ಯ ಮೂರು ಬಾರಿ ಸ್ನಾನ ಮಾಡುವ ಸಂಪ್ರದಾಯ ಕೆಲವರಲ್ಲಿದೆ. ಸ್ನಾನ ಮಾಡುವುದರಿಂದ, ಭೌತಿಕವಾಗಿ ದೇಹದ ಕಲ್ಮಷಗಳನ್ನು ತೊಳೆದುಕೊಳ್ಳಬಹುದು. ಅದರೊಂದಿಗೆ ಮನಸ್ಸಿನ ಕಲ್ಮಷಗಳನ್ನು ಕಳೆದುಕೊಳ್ಳುವುದರೊಂದಿಗೆ, ನಮ್ಮ ಭಾವನೆಗಳನ್ನು , ಮನಸ್ಸಿನ ಕೋಪ, ತಾಪವನ್ನು ನಿಯಂತ್ರಿಸಿಕೊಳ್ಳಬಹುದು. ನದಿ ತೀರಗಳಲ್ಲಿ ಮಾಡುವ ಜಲ ಸ್ನಾನವು ಜಲ ಚಿಕಿತ್ಸೆಗೆ ಪೂರಕವಾಗಿದೆ. ಪವಿತ್ರ ಸ್ನಾನ ಮಾಡುವುದರಿಂದ ದೇಹ ಹಾಗೂ ಮನಸು ಎರಡು ಶುದ್ಧವಾಗುತ್ತದೆ.
2. ದೀಪಾರಾಧನೆ 
ಪವಿತ್ರ ಸ್ನಾನಾನಂತರ, ದೀಪಗಳನ್ನು ಮನೆಯ ಅಂಗಳದಲ್ಲಿ ಮತ್ತು ಮನೆಯ ಸುತ್ತಮುತ್ತ ಬೆಳಗಬೇಕೆಂಬ ನಿಯಮವಿದೆ. ಶಿವ ಮತ್ತು ವಿಷ್ಣು ಮಂದಿರಗಳಲ್ಲಿ ಸೂರ್ಯೋದಯಕ್ಕೆ ಮುನ್ನ ಮತ್ತು ಸೂರ್ಯೋದಯಕ್ಕೆ ನಂತರ ಭಗವಂತನ ಪ್ರೀತ್ಯರ್ಥವಾಗಿ ಜ್ಯೋತಿಯನ್ನು ಬೆಳಗುತ್ತಾರೆ. ತುಪ್ಪದ ದೀಪವನ್ನು ಬೆಳಗುವುದರಿಂದ ಅಸುರೀ ಶಕ್ತಿಗಳು ನಾಶವಾಗುತ್ತವೆ, ಕ್ರಿಮಿ, ಕೀಟಗಳಿಂದ ಪರಿಸರ ಶುದ್ಧವಾಗುತ್ತವೆ. ಅದರೊಂದಿಗೆ ಮನಸ್ಸಿನ ಅಜ್ಞಾನವು ಕಳೆಯುತ್ತದೆ. ಹೀಗೆ ಮನೆಯಲ್ಲಿ ದೀಪ ಬೆಳಗುವುದರಿಂದ. ಐಶ್ವರ್ಯ, ಸಂಪತ್ತು, ಆರೋಗ್ಯ ಸ್ಥಿರವಾಗುತ್ತದೆ.
3. ಪವಿತ್ರ ಗಿಡದ ಪೂಜೆ 
ದೀಪವನ್ನು ಬೆಳಗಿ ಮನದೊಳಗಿನ ಅಜ್ಞಾನವನ್ನು ಕಳೆದುಕೊಂಡ ನಂತರ ತುಳಸಿ ದೇವಿಯ ಪೂಜೆಗೆ ಮುಂದಾಗುತ್ತೇವೆ. ತುಳಸಿ ಒಂದು ಗಿಡಮೂಲಿಕಾ ಸಸ್ಯವಷ್ಟೇ ಅಲ್ಲ, ವಾತಾವರಣದಲ್ಲಿ ಆಮ್ಲಜನಕವನ್ನು ಹೆಚ್ಚಿಸುವ ಶಕ್ತಿಯಾಗಿದೆ. ತುಳಸಿ ಪೂಜೆಯನ್ನು ಪ್ರತಿನಿತ್ಯ ಮಾಡುವ ಮಹಿಳೆಯರಿಗೆ ಸೌಭಾಗ್ಯ ಸಿದ್ಧಿಸುತ್ತದೆರ ಎನ್ನಲಾಗಿದೆ. ತುಳಸಿ ಗಿಡದ ಮುಂದೆ ದೀಪಾರಾಧನೆ ಮಾಡುವುದು ತ್ಯಾಗದ ಸಂಕೇತವಾಗಿದೆ.
4. ದಾಮೋದರನ ಪೂಜೆ 
ಶಿವ ಮತ್ತು ವಿಷ್ಣುವಿನ ಆರಾಧನೆಯೊಂದಿಗೆ ಶಿವ ಮತ್ತು ವಿಷ್ಣು ಎರಡೂ ಒಂದೇ ಎನ್ನುವ ಭಾವ ಮೂಡುತ್ತದೆ. ಶಿವ ಪ್ರಜ್ಞೆಯ ಸಂಕೇತವಾದರೆ, ವಿಷ್ಣುವು ಸ್ಥಿತಿಕಾರನಾಗಿದ್ದಾನೆ. ಹೇಗೆ ಬ್ರಹ್ಮಾಂಡವು ಸ್ಥಿತಿ ಮತ್ತು ಪ್ರಜ್ಞೆಯಿಂದ ಆವೃತ್ತವಾಗಿದೆಯೋ ಹಾಗೆಯೇ ಶಿವ ಮತ್ತು ವಿಷ್ಣುವಿನ ಪ್ರಜ್ಞೆಯು ನಮ್ಮಲ್ಲಿ ಅಡಕವಾಗಿದೆ. ಇಂತಹ ಪ್ರಜ್ಞೆಯೇ ನಮ್ಮನ್ನು ಅಧ್ಯಾತ್ಮ ಸಾಧನೆಯತ್ತ ಮುನ್ನಡೆಸುತ್ತದೆ.
5. ಸೋಮವಾರ ವಿಶೇಷ 
ಸೋಮವಾರ ಶಿವನಿಗೆ ಪ್ರಿಯವಾದ ವಾರ. ಸೋಮವಾರದ ಅಧಿಪತಿ ಚಂದ್ರ. ಚಂದ್ರ ಮನೋಕಾರಕ ಅಂದರೆ ಮನಸ್ಸಿನ ಮೇಲೆ ಹಿಡಿತವನ್ನು ಸಾಧಿಸುವವ. ಯಾರು ತಮ್ಮ ಮನಸ್ಸನನ್ನು ನಿಗ್ರಹದಲ್ಲಿ ಇಟ್ಟುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದರೊಂದಿಗೆ ತಮ್ಮ ವ್ಯಕ್ತಿತ್ವ ಬೆಳವಣಿಗೆಗೂ ಪೂರಕವಾಗುತ್ತಾರೆ. ಸಿದ್ಧಿಯನ್ನು ಪಡೆಯುತ್ತಾರೆ. ಹಾಗಾಗಿ ಯಾರು ಸೋಮವಾರದಂದು ಪ್ರದೋಷ ವ್ರತವನ್ನು ಆಚರಿಸುತ್ತಾರೋ, ಮನೋಕಾರಕ ಚಂದ್ರನನ್ನೇ ತನ್ನ ಶಿರದಲ್ಲಿ ಧಾರಣೆ ಮಾಡಿಕೊಂಡಿರುವ ಶಿವನನ್ನು ಕುರಿತು ಧ್ಯಾನ ಮಾಡುತ್ತಾರೋ, ಅವರು ಅತ್ಯುತ್ತ ಮ ಜ್ಞಾನವಂತರಾಗುತ್ತಾರೆ.
-----

ಕಾರ್ತಿಕ ಮಾಸದಲ್ಲಿ ಹುಟ್ಟಿದವರಿಗೆ ವಿಷ್ಣು, ಶಿವನ ಅನುಗ್ರಹ ಇರುತ್ತದೆ. ಈ ಸಂಬಂಧ ದೇವತಾ ಆರಾಧನೆ ಮಾಡಿದರೆ ರಾಜಯೋಗ ಲಭಿಸುತ್ತದೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ಮೃತ್ಯುಂಜಯ ಆರಾಧನೆ ಮಾಡಿದರೆ ಒಳ್ಳೆಯದು.