ತುಳಸಿ ವಿವಾಹ

ತುಳಸಿ ವಿವಾಹ:

ಪೂಜೆ ವಿಧಾನ ಮತ್ತು ಮಹತ್ವ 
ದೀಪಾವಳಿ ಹಬ್ಬ ಮುಗಿದ ಬಳಿಕ ಹಿಂದೂಗಳು ಒಂದು ತಿಂಗಳು ಕಾರ್ತಿಕ ಮಾಸವನ್ನು ಆಚರಿಸುತ್ತಾರೆ. ಈ ಕಾರ್ತಿಕ ಮಾಸ ಶಿವನಿಗೆ ಮುಡುಪಾಗಿರುವ ಮಾಸ. ಕಾರ್ತಿಕ ಮಾಸದ ಶುದ್ಧ ದ್ವಾದಶಿಯಂದು ಆಚರಿಸುವ ಹಬ್ಬವೇ ತುಳಸಿ ವಿವಾಹ. ಇದನ್ನು ಉತ್ಥಾನ ದ್ವಾದಶಿ ಎಂತಲೂ ಕರೆಯುವರು. ಉತ್ಥಾನ ಎಂದರೆ ಏಳುವುದು ಎಂದರ್ಥ. ಅಂದರೆ ಶ್ರೀಮನ್ನಾರಾಯಣನು ಪಾಲ್ಗಡಲಿನಲ್ಲಿ ತನ್ನ ಸುಖಶಯನದಿಂದ ಮೇಲೆದ್ದು ತನ್ನ ನಿದ್ರಾಮುದ್ರೆಯನ್ನು ಭಕ್ತರಿಗೆ ಸಾಕ್ಷಾತ್ಕರಿಸುವ ದಿನ.ಈ ದಿನ ಸಂಜೆಯ ಸಮಯದಲ್ಲಿ ತುಳಸಿ ವಿವಾಹ ಏರ್ಪಡುವುದು. ಚಾಂದ್ರಮಾನ ಕಾರ್ತಿಕಮಾಸದ ಶುಕ್ಲಪಕ್ಷದ 12ನೇ ದಿನ ಅಂದರೆ ದ್ವಾದಶಿಯಂದು ವಿಷ್ಣು ಸ್ವರೂಪಿ ನೆಲ್ಲಿಕಾಯಿ ಗಿಡದೊಂದಿಗೆ ತುಳಸಿಯ ವಿವಾಹವನ್ನು ಶ್ರದ್ಧಾ ಭಕ್ತಿಯಿಂದ ಮಾಡಿ ಹಬ್ಬವನ್ನು ಆಚರಿಸಲಾಗುವುದು. 

ತುಳಸಿ ವಿವಾಹ ಆಚರಣೆಯ ಹಿಂದಿರುವ ಪೌರಾಣಿಕ ಕಥೆ ಈ ಆಚರಣೆಯ ಹಿಂದೆ ಒಂದು ಸುಂದರವಾದ ಕಥೆಯಿದೆ. ಹಿಂದೂ ಪುರಾಣದ ಪ್ರಕಾರ ವೃಂದಾ ಎಂಬ ಹೆಸರಿನ ಯುವತಿಯೇ ತುಳಸಿಗಿಡವಾಗಿ ಪರಿವರ್ತನೆಯಾಗಿರುತ್ತಾಳೆ. ಈಕೆ ಜಲಂಧರನೆಂಬ ಲೋಕಕಂಟಕ ರಾಜನ ಪತ್ನಿಯಾಗಿರುತ್ತಾಳೆ. ಆಕೆಗೆ ಮಹಾವಿಷ್ಣುವಿನ ಪರಮ ಭಕ್ತೆ. ಈಕೆಯ ಪಾತಿವ್ರತ್ಯದ ಫಲವಾಗಿ ಯಾರೂ ಸೋಲಿಸಲು ಸಾಧ್ಯವಾಗದ ಮಟ್ಟಕ್ಕೆ ಬೆಳೆಯುತ್ತಾನೆ. ತನ್ನ ಯಾರೂ ಸೋಲಿಸಲಾರರು ಎಂಬ ಅಹಂನಿಂದ ದೇವತೆಗಳಿಗೆ ಉಪಟಳ ಕೊಡಲು ಪ್ರಾರಂಭಿಸುತ್ತಾನೆ. ಈತನ ಉಪಟಳ ಎಲ್ಲೆ ಮೀರಿದಾಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ, ಆಗ ಶಿವನು ವಿಷ್ಣುವಿನ ಬಳಿ ಹೋಗಿ ಸಮಸ್ಯೆಯನ್ನು ನೀಗಿಸುವಂತೆ ಹೇಳುತ್ತಾನೆ. ಆಗ ವಿಷ್ಣುವು ಜಲಂಧರನ ರೂಪ ತಾಳಿ ವೃಂದಾಳ ಬಳಿಗೆ ಬಂದು ಮೋಹಿಸಿ ಆಕೆಯ ಪಾವಿತ್ರ್ಯತೆಗೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರ ರಾಜನನ್ನು ಸಂಹರಿಸುತ್ತಾನೆ. ಇತ್ತ ತನ್ನ ಚಾರಿತ್ರ್ಯಕ್ಕೆ ಧಕ್ಕೆ ಅಗಿದ್ದು ಗೊತ್ತಾಗಿ ವೃಂಧಾ ವಿಷ್ಣುವಿಗೆ ಕಪ್ಪು ಕಲ್ಲಾಗಿ ಹೋಗು ಹಾಗೂ ನಿನಗೆ ಪತ್ನಿಯ ವಿರಹವುಂಟಾಗಲಿ ಎಂದು ಶಾಪ ನೀಡಿ ತನ್ನ ಪತಿಯ ಚಿತೆಗೆ ಹಾರಿ ದೇಹ ತ್ಯಾಗ ಮಾಡುತ್ತಾಳೆ. ವಿಷ್ಣುವು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ಮುಂದಿನ ಜನ್ಮದಲ್ಲಿ ಸಾಲಿಗ್ರಾಮವಾಗಿ ಪ್ರಭೋದಿನಿ ಏಕಾದಶಿಯ ದಿನ ತುಳಸಿಯನ್ನು ಮದುವೆಯಾಗುತ್ತಾನೆ ಎಂಬ ಕಥೆಯಿದೆ. ಇದರ ಸಂಕೇತವೇ ವಿಷ್ಣು-ತುಳಸಿ ವಿವಾಹ. 
ಇನ್ನೊಂದು ಪುರಾಣದ ಪ್ರಕಾರ ದೇವತೆಗಳು ಹಾಗೂ ದಾನವರ ನಡುವೆ ಸಮುದ್ರ ಮಂಥನ ನಡೆದಾಗ ಕೊನೆಯಲ್ಲಿ ಅಮೃತ ಬಂತು. ಅದನ್ನು ಕೈಗೆ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪಗಳು ಕಲಶದಲ್ಲಿ ಬಿದ್ದು ಅದರಿಂದ ಒಂದು ಸಣ್ಣ ಗಿಡ ಹುಟ್ಟಿತು. ಅದಕ್ಕೆ ತುಳಸಿಯೆಂದು ಹೆಸರಿಟ್ಟು ಲಕ್ಷ್ಮಿಯೊಂದಿಗೆ ತುಳಸಿಯನ್ನು ಕೂಡ ತನ್ನ ಪತ್ನಿಯಾಗಿಸುತ್ತಾನೆ ಎಂಬ ಕತೆಯಿದೆ. ಹಿಂದೂಗಳಲ್ಲಿ ತುಳಸಿ ಹಬ್ಬ ಮುಗಿದ ಬಳಿಕ ಮದುವೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. 
ತುಳಸಿ ಹಬ್ಬ ಆಚರಣೆಯ ಮಹತ್ವ :::ಮುತ್ತೈದೆಯರು ತುಳಸಿ ಹಬ್ಬ ಆಚರಣೆ ಮಾಡುವುದರಿಂದ ತನ್ನ ಗಂಡನ ಆರೋಗ್ಯ, ಅಯುಸ್ಸು ಹೆಚ್ಚಾಗುವುದು ಎಂದು ಹೆಳಲಾಗುವುದು. ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿ ಗಿಡದಲ್ಲಿ ವಿಷ್ಣು ನೆಲಿಸಿರುತ್ತಾನೆ ಎಂಬ ನಂಬಿಕೆ ಇದೆ, ಆದ್ದರಿಂದ ಉತ್ಥಾನ ದ್ವಾದಶಿ ದಿನ ನೆಲ್ಲಿಕಾಯಿ ಗಿಡ ಹಾಗೂ ತುಳಸಿ ಗಿಡಕ್ಕೆ ಪೂಜೆ ಮಾಡಿ ವಿವಾಹ ಆಚರಣೆ ಮಾಡುತ್ತಾರೆ. ಈ ಆಚರಣೆಯಿಂದಾಗಿ ಪತಿಗೆ ಒಳಿತಾಗುವುದು ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ.
ತುಳಸಿ ವಿವಾಹ ಮಾಡುವುದು ಹೇಗೆ? ಹಿಂದೂಗಳ ಮನೆ ಮುಂದೆ ತುಳಸಿ ಗಿಡವಿದ್ದೇ ಇರುತ್ತದೆ. ಉತ್ಥಾನ ದ್ವಾದಶಿಯಂದು ತುಳಸಿ ಕಟ್ಟೆಯನ್ನು ತೊಳೆದು ಅದಕ್ಕೆ ರಂಗೋಲಿ, ಹೂವು, ಮಾವಿನ ಎಲೆಗಳಿಂದ ಅಲಂಕರಿಸಿ ವಿಷ್ಣುವಿನ ಅವತಾರ ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸಲಾಗುತ್ತದೆ. ದೀಪಾವಳಿ ಸಮಯದಲ್ಲಿ ಇದ್ದಷ್ಟೇ ಸಂಭ್ರಮ ಈ ತುಳಸಿ ವಿವಾಹ ಆಚರಣೆಯಲ್ಲೂ ಇರುತ್ತದೆ. ಹೆಂಗಳೆಯರು ತುಳಸಿ ಗಿಡವನ್ನು ಮದುವಣಗಿತ್ತಿಯಂತೆ ಸಿಂಗರಿಸುತ್ತಾರೆ. ವಿಷ್ಣುವಿನ ಅಥವಾ ಅವನ ಅವತಾರವಾದ ಕೃಷ್ಣ, ರಾಮನ ಫೋಟೋವನ್ನು ಇಲ್ಲವೇ ಸಾಲಿಗ್ರಾಮ ಕಲ್ಲು, ಇಲ್ಲವೇ ನೆಲ್ಲಿಕಾಯಿ ಗಿಡವನ್ನು ತುಳಸಿ ಗಿಡದ ಪಕ್ಕ ಇಟ್ಟು ಇಬ್ಬರನ್ನೂ ಸ್ನಾನ ಮಾಡಿಸಿ ಶುಭ್ರ ಬಟ್ಟೆ ತೊಡಿಸಿ ಹೂವು, ಹಣ್ಣುಗಳಿಂದ ಅಲಂಕರಿಸುತ್ತಾರೆ. ವಿಷ್ಣುವಿನ ಭಾವಚಿತ್ರ ಹಾಗೂ ತುಳಸಿ ಗಿಡಕ್ಕೆ ಹತ್ತಿಯಿಂದ ತಯಾರಿಸಿದ ಮಾಲೆಯನ್ನು ತೊಡಿಸಿ ಮದುವೆಯ ಶಾಸ್ತ್ರ ಮಾಡಲಾಗುತ್ತದೆ. ಹಿಂದೂ ವಿವಾಹ ಪದ್ಧತಿಯಲ್ಲಿ ನಡೆಯುವ ಆಚರಣೆಯಂತೆಯೇ ವಿಷ್ಣು-ತುಳಸಿ ವಿವಾಹವನ್ನು ಭಕ್ತರು ಆಚರಿಸುತ್ತಾರೆ.
ತುಳಸಿ ವಿವಾಹ ಆಚರಣೆಯ ಮಹತ್ವ :::ತುಳಸಿ ವಿವಾಹ ಆಚರಣೆ ಮಾಡುವವರು ಉಪವಾಸವಿದ್ದು ಈ ಆಚರಣೆ ಮಾಡುತ್ತಾರೆ. ತುಳಸಿ ಗಿಡದ ಸುತ್ತ ಮದುವೆ ಮಂಟಪ ನಿರ್ಮಿಸಿ ಅದಕ್ಕೆ ಅಲಂಕರಿಸಿರುತ್ತಾರೆ, ಈ ಮಂಟಪಕ್ಕೆ ಬೃಂದಾವನವೆಂದು ಹೆಸರು. ಈ ಮಂಟಪದಲ್ಲಿ ವೃಂದಾಳ ಆತ್ಮವಿದ್ದು ಮರುದಿನ ಬೆಳಗ್ಗೆ ಹೊರಟು ಹೋಗುತ್ತದೆ ಎಂಬ ನಂಬಿಕೆಯಿದೆ. ತುಳಸಿ ವಿವಾಹ ನೋಡಲು ಬಂದವರು ತುಳಸಿ ಹಾಗೂ ವಿಷ್ಣು ಫೋಟೋ ಅಥವಾ ನೆಲ್ಲಿಕಾಯಿ ಗಿಡವನ್ನು ಅಲಂಕಾರ ಮಾಡಿ ಪೂಜಿಸಿದ ಮಹಿಳೆಯರಿಗೆ ಉಡುಗೊರೆಗಳನ್ನು ನಿಡುವವರು. ತುಳಸಿ ವಿವಾಹದಂದು ಹಬ್ಬದ ಅಡುಗೆಯನ್ನು ಮಾಡಿ ಈ ಹಬ್ಬವನ್ನು ಆಚರಿಸಲಾಗುವುದು. ಹಿಂದೂಗಳು ಈ ಹಬ್ಬ ಅಚರಣೆಯ ಬಳಿಕ ಮದುವೆ ಹಾಗೂ ಗೃಹ ಪ್ರವೇಶವನ್ನು ಮಾಡುತ್ತಾರೆ.

No comments:

Post a Comment