ಯಕ್ಷಗಾನ

ಯಕ್ಷಗಾನ-ಭಾಗ-೦೧

ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ.
ನಾಟ್ಯಶಾಸ್ತ್ರ ಎಂದಕೂಡಲೇ ಭರತ ಮುನಿ-ಅಭಿನವಗುಪ್ತರ ವ್ಯಕ್ತಿತ್ವದ ಪರಿಚಯ ಮತ್ತು ನಾಟ್ಯಶಾಸ್ತ್ರ ರಚಯಿತೃ ಶಿವಾನುಭೂತಿ ಸಹಜವೇ. ಹಲವಾರು ಗಣ್ಯರು ಈ ಶಾಸ್ತ್ರವನ್ನು ಆಸ್ತೀಕ ಜನತೆಗಳಿಗೆ ತಲುಪುವಂತೆ ಮಾಡಿರುವ ಪ್ರಯತ್ನ ಹೇಳಲಸದಳ.ಈ ಸಣ್ಣ ಬರಹವನ್ನು ನನ್ನ ಪರಿಶ್ರಮದ ವ್ಯಾಪ್ತಿಯಲ್ಲಿ ವಿಸ್ತೀರ್ಣಮಾಡುವ ಸಾಹಸ ಕಾರ್ಯಕ್ಕೆ ನನ್ನನ್ನು ಪ್ರೋತ್ಸಾಹಿಸಿದ ಸನ್ನಿವೇಶದ ಸ್ಮರಣೆ ಮುಖ್ಯ. ಎಂದಿನಂತೆ ಬನ್ನಂಜೆಯವರು ತಮಗಿರುವ ಸಮಯದ ಕೊರತೆಯಿಂದಲೋ ಅಥವಾ ಅಭಿಮಾನದ ಹುಮ್ಮಸ್ಸಿನಿಂದಲೋ ಯಕ್ಷಗಾನ ಸಂಬಂಧ ಕಾಲ ಹಾಗೂ ಕರ್ತೃ ಸಂಬಂಧ ನಿರ್ಣಯ ಮಾಡುವಲ್ಲಿ ಸ್ವಲ್ಪವೇ ಎಡವಿದ್ದಾರೆ.  ಈ ಸನ್ನಿವೇಶದಿಂದ  ನಾನು ಪ್ರಚೋದಿತನಾಗಿರುವದು ಸತ್ಯದರ್ಶನ ಹಾಗೂ ಸತ್ಯನಿಷ್ಠೆಯಿಂದಲೇ ಹೊರತು ಬನ್ನಂಜೆಯವರಲ್ಲಿ ನನ್ನ ವೈಯಕ್ತಿಕ ದ್ವೇಷವೇನಿಲ್ಲ ಎಂಬುವದನ್ನು ಸ್ಪಷ್ಟಪಡಿಸುತ್ತೇನೆ. 

ಈ ದಿಕ್ಕಿನಲ್ಲಿ ಸ್ವಲ್ಪವಾದರೂ ನನ್ನ ತಿಳುವಳಿಕೆಯು ಸಹಾಯವಾಗುತ್ತದೆ ಎನ್ನುವದಕ್ಕೆ ನನ್ನ ಗುರುಕಲ್ಪದ ಬೃಹದಾಶೀರ್ವಾದವೇ ಎಂಬುದನ್ನು ನಾನು ಯಾವಕಾಲಕ್ಕೂ ಮರೆಯುವಂತಿಲ್ಲ.

ಯಕ್ಷಗಾನದ ಕಾಲ ಇದಮಿತ್ಥಂ ಎಂಬುದಾಗಿ ಹೇಳಲು ಸಾಧ್ಯವೇ ಇಲ್ಲವಾದರೂ ಇದಕ್ಕೆ   ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ ಇರುವದನ್ನು ನಮ್ಮ ಸನಾತನ ಶಾಸ್ತ್ರಗ್ರಂಥಗಳಲ್ಲಿ , ಪುರಾತನ ಕಾವ್ಯಗಳಲ್ಲಿ , ಸಂಗೀತ ಶಾಸ್ತ್ರಗಳಲ್ಲಿ ಕಂಡುಕೊಳ್ಳಬಹುದು.ಸನಾತನ ಶಾಸ್ತ್ರಗ್ರಂಥಗಳಲ್ಲಿ ಯಕ್ಷಗಾನ ಎಂಬ ಹೆಸರು ಕಂಡುಬರುವದಿಲ್ಲ ಎಂಬ ಒಂದೇ ಕಾರಣಕ್ಕೆ ಯಕ್ಷಗಾನವು ಅರ್ವಾಚೀನ  ಕಲೆ ಎಂಬುದಾಗಿ ಹೇಳ ಬರುವದಿಲ್ಲ.ಯಕ್ಷಗಾನ ಸನಾತನವಾಗಿಲ್ಲದಿದ್ದರೇ ಇಂದಿನ ದಿನಕ್ಕೆ ಅದು ಇಷ್ಟೊಂದು ಪ್ರಸಿದ್ಧಿಯಾಗಲೀ ಅಥವಾ ಉತ್ಕೃಷ್ಟ ಮನೋರಂಜನೆಯನ್ನು ಕೊಡುವಂಥ  ಕಲೆಯಾಗಿ ಉಳಿಯುತ್ತಿರಲಿಲ್ಲ. ಈ ಕಲೆಯಲ್ಲಿ ಸನಾತನವಾದ ದಿವ್ಯತೆ ಇರುವದರಿಂದಲೇ ಇಂದಿಗೂ ಇದು ಜನರನ್ನು ತನ್ನೆಡೆಗೆ ಮೊದಲಿಗಿಂತಲೂ ಹೆಚ್ಚಿನದಾಗಿ ಕಲಾರಾಧಕರನ್ನು ಸೆಳೆದುಕೊಳ್ಳುತ್ತಿದೆ. ಯಕ್ಷಗಾನ ಎಂಬ ಬರಹದ ಈ ಸಂಚಿಕೆಯಲ್ಲಿ ನಾನು ಈವರೆವಿಗೂ ಉಪಲಬ್ಧವಿರುವ ಯಾವುದೇ ಅರ್ವಾಚೀನ ಗ್ರಂಥಗಳ ವಿಷಯವನ್ನು  ಉಲ್ಲೇಖ ಮಾಡದೇ , ಪ್ರಸ್ತುತ ಯಕ್ಷಗಾನ ಕಲೆಯ ಕುರಿತಾದ ಲಕ್ಷಣಗಳನ್ನು ಸನಾತನ ಶಾಸ್ತ್ರಗ್ರಂಥಗಳ ಸಂಬಂಧ ವಿಷಯವನ್ನು ಸಂಯೋಜಿಸಿ ಮುಂದಿನ ಭಾಗಗಳಲ್ಲಿ ಈ ಯಕ್ಷಗಾನ ಎಂಬ ಕಲೆಯು ದೇವಗಂಧರ್ವಕಾಲದಿಂದಲೂ ಪಾರಂಪರಿಕವಾಗಿ ಹಾಗೂ ಶಾಸ್ತ್ರೀಯವಾಗೇ ನಡೆದುಕೊಂಡು ಬಂದಿರುವ   ದಿವ್ಯಕಲಾವಿದ್ಯೆ ಎಂಬುವದನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ.

ಮೊದಲಿಗೆ ಯಕ್ಷಗಾನ ಎಂಬುದರ ನಿರ್ವಚನದ ಮೂಲಕ ಪ್ರಸಿದ್ಧಾರ್ಥ ಮತ್ತು ಯಥಾರ್ಥವನ್ನು ತಿಳಿದುಕೊಳ್ಳೋಣ.

ಯಕ್ಷಗಾನ:- ಯಕ್ಷ-ಗಾನ. ಯಕ್ಷರ ಹಾಡುಗಾರಿಕೆ.

ಗಾನ:- ಎಂದರೇನು ?

ಸಂಗೀತ ದರ್ಪಣ :-

ಗಾನಂಹಿವೈದಿಕಲೌಕಿಕಭೇದಾತ್ದ್ವಿವಿಧಮ್|ತತ್ರವೈದಿಕಗಾನನ್ತುಮುಕ್ತಿಪ್ರದಂಅನ್ಯತೋಲ್ಲೋಕರಞ್ಜನಕರಮ್|

ಗಾನವು ವೈದೀಕ ಮತ್ತು ಲೌಕಿಕ ಎಂಬುದಾಗಿ ಎರಡು ವಿಧ.ವೈದೀಕಗಾನವು ಮುಕ್ತಿಪ್ರದವೂ ಲೌಕಿಕ ಗಾನವು ಮನೋರಂಜನೆಯನ್ನೂ ಕೊಡುವಂಥದ್ದಾಗಿದೆ. ಮನೋರಂಜನೆಯೇ ಯಕ್ಷಗಾನದ ಮುಖ್ಯಲಕ್ಷಣ.ಹೇಗೆ ?   

ರಾಗರಾಗಿಣೀನಾಂವಿಶೇಷವಿವರಣನ್ತುತತ್ತಚ್ಛಬ್ದೇಗಾನಸ್ಯಅನ್ಯದ್ವಿವರಣಂಗೀತಶಬ್ದೇಚದರ್ಶನೀಯಮ್ ||

ಭಾವೋದ್ರಿಕ್ತರಾಗಿ , ಹಾವಭಾವವಿಶೇಷಣಗಳನ್ನೂ , ಶಬ್ದಗಳ ಸಾಹಿತ್ಯಸಂಬಂಧ ವಿವರಣೆಗಳನ್ನೂ ,ನಟನೆಯಮೂಲಕ ಅವುಗಳ ಭಾವಾರ್ಥವನ್ನೂ ಒಡಗೂಡಿಸಿಕೊಂಡು ಹೇಳುವದೇ ಗಾನ. ಗಾನ ಎಂದರೇ  ಕೇವಲ ಹಾಡುಗಾರಿಕೆಯಲ್ಲ.

ಹಾಗಿದ್ದರೇ ಯಕ್ಷಗಾನಕ್ಕೂ  ಮನರಂಜನೆಗೂ ಹೇಗೆ ಸಂಬಂಧ ?  

ಯಕ್ಷ ಎಂದರೇ ಯಾರು ? 

ಮಹಾಭಾರತ : - ಆದಿಪರ್ವ  

*ಪುರುಷಶ್ಚಾಪ್ರಮೇಯಾತ್ಮಾ ಯಂ ಸರ್ವಮೃಷಯೋ ವಿದುಃ | ವಿಶ್ವೇದೇವಾಸ್ತಥಾದಿತ್ಯಾ ವಸವೋಽಥಾಶ್ವಿನಾವಪಿ || ೦೧.೩೨ ||

ಯಕ್ಷಾಃ ಸಾಧ್ಯಾಃ ಪಿಶಾಚಾಶ್ಚ ಗುಹ್ಯಕಾಃ ಪಿತರಸ್ತಥಾ |  ತತಃ ಪ್ರಸೂತಾ ವಿದ್ವಾಂಸಃ ಶಿಷ್ಟಾ ಬ್ರಹ್ಮರ್ಷಯೋಽಮಲಾಃ* ||೦೧.೩೩ ||

ಯಾರನ್ನು  ಮಹರ್ಷಿಗಳು ಅಪ್ರಮೇಯನೆಂದೂ ಮಾಹಾಪುರುಷನೆಂದೂ ತಿಳಿದಿರುವರೋ ಅಂಥ ಮಹಾವಿಷ್ಣುವನ್ನು ಅನುಸರಿಸಿ ವಿಶ್ವೇದೇವತೆಗಳು , ಅಷ್ಟಾವಸುಗಳು ,ದ್ವಾದಶಾದಿತ್ಯರೂ ಆಶ್ವಿನೀ ದೇವತೆಗಳು ,ಯಕ್ಷರೂ ,ಸಿದ್ಧರೂ(ಸಾಧ್ಯರೂ) , ಪಿಶಾಚರೂ ಗುಹ್ಯಕರೂ ,ಪಿತೃದೇವತೆಗಳು ಹುಟ್ಟಿದರು.

*ರಾಕ್ಷಸಾಸ್ತು ಪುಲಸ್ತ್ಯಸ್ಯ ವಾನರಾಃ ಕಿಂನರಾಸ್ತಥಾ* ||೬೦-೦೭||  .

ಪುಲಸ್ತ್ಯನಿಗೆ ರಾಕ್ಷಸರೂ , ವಾನರರೂ ಮತ್ತು ಯಕ್ಷಕಿನ್ನರರೂ ಹುಟ್ಟಿದರು.

ಸಭಾಪರ್ವದಲ್ಲಿ ನಾರದರಿಂದ ಕುಬೇರನ ಸಭಾವರ್ಣನೆ

*ಅನಿಶಂ ದಿವ್ಯವಾದಿತ್ರೈರ್ನೃತ್ತೈರ್ಗೀತೈಶ್ಚ ಸಾ ಸಭಾ | ಅಶೂನ್ಯಾ ರುಚಿರಾ ಭಾತಿ ಗನ್ಧರ್ವಾಪ್ಸರಸಾಂ ಗಣೈಃ || ೦೨. ೦೧೦ .೧೩ || 

ಕಿಂನರಾ ನಾಮ ಗನ್ಧರ್ವಾ ನರಾ ನಾಮ ತಥಾಪರೇ |  ಮಣಿಭದ್ರೋಽಥ ಧನದಃ ಶ್ವೇತಭದ್ರಶ್ಚ ಗುಹ್ಯಕಃ || ೦೨. ೦೧೦ .೧೪ || 

 ಕಶೇರಕೋ ಗಣ್ಡಕಣ್ಡುಃ ಪ್ರದ್ಯೋತಶ್ಚ ಮಹಾಬಲಃ | ಕುಸ್ತುಮ್ಬುರುಃ ಪಿಶಾಚಶ್ಚ ಗಜಕರ್ಣೋ ವಿಶಾಲಕಃ || ೦೨. ೦೧೦ .೧೫ || 

ವರಾಹಕರ್ಣಃ ಸಾನ್ದ್ರೋಷ್ಠಃ ಫಲಭಕ್ಷಃ ಫಲೋದಕಃ |  ಅಙ್ಗಚೂಡಃ ಶಿಖಾವರ್ತೋ ಹೇಮನೇತ್ರೋ ವಿಭೀಷಣಃ || ೦೨. ೦೧೦ .೧೬ || 

ಪುಷ್ಪಾನನಃ ಪಿಙ್ಗಲಕಃ ಶೋಣಿತೋದಃ ಪ್ರವಾಲಕಃ |  ವೃಕ್ಷವಾಸ್ಯನಿಕೇತಶ್ಚ ಚೀರವಾಸಾಶ್ಚ ಭಾರತ || ೦೨. ೦೧೦ .೧೭ || 

ಏತೇ ಚಾನ್ಯೇ ಚ ಬಹವೋ ಯಕ್ಷಾಃ ಶತಸಹಸ್ರಶಃ* || ೦೨. ೦೧೦ .೧೫ || 

ನಾರದರು ಯುಧಿಷ್ಠಿರನಿಗೆ ಕುಬೇರನ ಆಸ್ಥಾನದ ವೈಭವನ್ನು ವರ್ಣನೆ ಮಾಡುತ್ತಾರೆ.

ಗಂಧರ್ವ,ಅಪ್ಸರೆಯರು, ಯಕ್ಷರುಗಳಾದ ಮಣಿಭದ್ರ,ಧನದ,ಶ್ವೇತಭದ್ರ,ಗುಹ್ಯಕ,ಕೇಶರಕ, ಗಂಡಕಂಡು, ಪ್ರದ್ಯೋತ,ಮಹಾಬಲ,ಕುಸ್ತುಂಬುರು, ಪಿಶಾಚ, ಗಜಕರ್ಣ, ವಿಶಾಲಕ,ವರಾಹಕರ್ಣ,ಸಾಂದ್ರೋಷ್ಠ , ಫಲಭಕ್ಷ, ಅಂಗಚೂಡ,ಶಿಖಾವರ್ತ, ಹೇಮನೇತ್ರ,ವಿಭೀಷಣ , ಪುಷ್ಪಾನನ,ಪಿಂಗಲಕ, ಶೋಣಿತೋದ, ಪ್ರವಾಲಕ , ವೃಕ್ಷವಾಸ, ನಿಕೇತ,ಚೀರವಾಸ ಮತ್ತೂ ಸಹಸ್ರಾರು ಯಕ್ಷರುಗಳು  ನೃತ್ತ-ನೃತ್ಯಪದವಿನ್ಯಾಸಗಳ ಧ್ವನಿಗಳಿಂದಲೂ , ಸುಮಧುರ ಗಾನಗಳಿಂದಲೂ ವೀಣಾಮೃದಂಗಾದಿ ವಾದ್ಯಗೋಷ್ಠಿಗಳಿಂದಲೂ ಕೆಬೇರನನ್ನು ಸಂತೋಷಪಡಿಸುತ್ತಾ ಸೇವಿಸುತಿರುತ್ತಾರೆ. 

ಈ ಮೇಲಿನ ಪ್ರಸಂಗವನ್ನು ಕಾಳಿದಾಸನೂ ತನ್ನ ಮೇಘದೂತದಲ್ಲಿ ವರ್ಣಿಸಿದ್ದಾನೆ.

ಮೇಘದೂತ :- 

*ಅಕ್ಷಯ್ಯಾನ್ತರ್ಭವನನಿಧಯಃ ಪ್ರತ್ಯಹಂ ರಕ್ತಕಣ್ಠೈರುದ್ಗಾಯದ್ಭಿರ್ಧನಪತಿಯಶಃ ಕಿಂನರೈರ್ಯತ್ರ ಸಾರ್ಧಮ್*  |

ಧನಪತಿಯಾದ ಕುಬೇರನ ಆಸ್ಥಾನದಲ್ಲಿ ಪ್ರತಿನಿತ್ಯವೂ ಯಕ್ಷಕಿನ್ನರರು ಮುಕ್ತಕಂಠದಿಂದ ಉಚ್ಚಸ್ಥಾಯಿಯಲ್ಲಿ ಹಾಡುಗಳನ್ನು ಹೇಳುತ್ತಿದ್ದರು. 

ಹರಿ ಓಮ್ ತತ್ ಸತ್

ಸತ್ಯಪ್ರಕಾಶ

ಮುಂದಿನ ಭಾಗ

ಯಕ್ಷಗಾನ-ಭಾಗ-೦೨

ಪೌರಾಣಿಕ ಮತ್ತು ಐತಿಹಾಸಿಕ  ಹಿನ್ನೆಲೆ.

ಸನಾತನ ಗ್ರಂಥದಲ್ಲಿರುವ ಯಕ್ಷಗಾನದ ಲಕ್ಷಣಗಳು .

No comments:

Post a Comment